
ಕಾರ್ಕಳ : ಮಾನವಿಕ ಸಂಘದ ಉದ್ಘಾಟನಾ ಸಮಾರಂಭವು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನೆರವೇರಿತು. ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಮೋನಾ ಮೆಂಡೋನ್ಸಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಅವರು ಮಾತನಾಡುತ್ತಾ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವಯಂ ಕೌಶಲವು ಅತ್ಯಂತ ಅಗತ್ಯವಾಗಿದೆ. ಅದರೊಂದಿಗೆ ಸೃಜನಶೀಲ ಆಲೋಚನೆ, ಸಂವಹನ, ವಿಮರ್ಶಾತ್ಮಕ ಚಿಂತನೆಯೂ ಅಗತ್ಯ. ಕಲಿಯುವುದು ಮತ್ತು ಗಳಿಸುವುದು ಈ ಎರಡೂ ಆದಾಗ ಮಾತ್ರ ಕಲಿಕೆ ಸಾರ್ಥಕವಾಗುತ್ತದೆ.
ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಲು ಇಂದೇ ತಯಾರಿ ನಡೆಸಬೇಕು. ಹೆಚ್ಚು ಭಾಷೆಗಳ ಬಳಕೆ ವಿದ್ಯಾರ್ಥಿಗಳಿಗೆ ಅನೇಕ ಅನುಕೂಲಗಳನ್ನು ಒದಗಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಎ. ಕೋಟ್ಯಾನ್ಮಾ ತನಾಡುತ್ತಾ, ಸ್ವ ಸಾಮಾರ್ಥ್ಯ, ಇಚ್ಚೆ, ಅವಕಾಶ ಈ ಮೂರು ಇದ್ದರೆ ಯಶಸ್ಸು ಖಂಡಿತ ಸಾಧ್ಯವಿದೆ. ಈ ಮೂರರಲ್ಲಿ ಯಾವುದಾದರೊಂದು ಇಲ್ಲದೇ ಹೋದರೆ ನಷ್ಟವಾಗುತ್ತದೆ. ಹಣ ಬದುಕಿನಲ್ಲಿ ಮುಖ್ಯ ಹೌದು. ಆದರೆ ಹಣವೇ ಎಲ್ಲವೂ ಅಲ್ಲ. ವಿದ್ಯಾರ್ಥಿಗಳು ಮೌಲ್ಯದ ಕಡೆಗೆ ಗಮನ ಹರಿಸಬೇಕಾದ ಅಗತ್ಯತೆ ಈ ದಿನಗಳಲ್ಲಿ ಅವಶ್ಯವಾಗಿ ಆಗಬೇಕಾಗಿದೆ ಎಂದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್ ಉಪಸ್ಥಿತರಿದ್ದರು. ಮಾನವಿಕ ಸಂಘದ ಸಂಯೋಜಕರೂ,ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ.ಸುಚಿತ್ರಾ ಪ್ರಸ್ತಾವಿಸಿ, ಸ್ವಾಗತಿಸಿದರು. ದ್ವಿತೀಯ ಬಿ.ಎ.ಆರನ್ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.ಅಂತಿಮ ಬಿ.ಎ.ಯ ರೋಶನ್ ವಂದಿಸಿದರು.





















































































