28.8 C
Udupi
Sunday, May 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 269

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೨೭೦ ಮಹಾಭಾರತ

ಇತ್ತ ದಕ್ಷಿಣದ ತ್ರಿಗರ್ತರನ್ನು ಸೋಲಿಸಿ, ವಿಹಾರಗೈದು ವಿಜಯೋತ್ಸಾಹದಿಂದ ರಾಜಾ ವಿರಾಟ, ದ್ವಿಜ ಕಂಕ, ವಲಲ, ದಾಮಗ್ರಂಥಿಯರೊಂದಿಗೆ ಸೇನೆ ನಗರಕ್ಕೆ ಬಂದು ಸೇರಿತು. ವಿಜಯಿಯಾಗಿ ಬಂದ ವಿರಾಟ ಅರಮನೆಯಲ್ಲಿ ವಿಶ್ರಾಂತನಾಗಲು ಬಯಸಿದರೂ, ಮಗ ಉತ್ತರಕುಮಾರನೆಲ್ಲಿ ಎಂದು ಕೇಳಿದಾಗ, ಪರಿಚಾರಕಿಯರು “ಉತ್ತರ ದಿಕ್ಕಿನಿಂದ ಹಸ್ತಿನಾವತಿಯ ಸೇನೆ ಬಂದು ನಮ್ಮ ಗೋವುಗಳನ್ನು ಅಪಹರಿಸಲು ಮುಂದಾದರು. ಆ ದೂರು ತಂದ ಗೋಪಾಲಕರಿಗೆ ಧೈರ್ಯದ ಮಾತನ್ನು ಹೇಳಿದ ಯುವರಾಜರು ಬ್ರಹನ್ನಳೆಯ ಸಾರಥ್ಯದಲ್ಲಿ ಗೋವುಗಳ ರಕ್ಷಣೆಗಾಗಿ ಹೋಗಿದ್ದಾರೆ” ಎಂದು ಹೇಳಿದರು.

ಈ ಮಾತನ್ನು ಕೇಳಿ ಭಯಗ್ರಸ್ಥನಾದ ವಿರಾಟರಾಯ “ಹಸ್ತಿನೆಯ ಸೇನೆಯೆ? ಭೀಷ್ಮ, ದ್ರೋಣ, ಕರ್ಣಾದಿಗಳಿರುವ ಆ ಅತಿಬಲ ಸೈನ್ಯವನ್ನು ಏಕಾಂಗಿ ಉತ್ತರ ಎದುರಿಸಲು ಹೋದನೆ? ಅದೂ ಆ ಹೆಣ್ಣಿಗ ನಾಟ್ಯಗುರುವಿನ ಸಾರಥ್ಯದಲ್ಲಿ? ಏನು ಅನಾಹುತವಾಗಿ ಹೋಯಿತು ದೇವರೇ!” ಎಂದು ಕಂಗಾಲಾದನು.

ಆಗ ಬಳಿಯಿದ್ದ ಕಂಕ “ಧೈರ್ಯ ತಂದುಕೊಳ್ಳಿ ಮಹಾರಾಜ. ಬ್ರಹನ್ನಳೆ ಉತ್ತರನ ಜೊತೆಗಿದ್ದರೆ ನೀವು ಆತಂಕ ಪಡುವ ಅವಶ್ಯಕತೆಯಿಲ್ಲ” ಎಂದನು.

ಅಷ್ಟರಲ್ಲಿ ಸಂದೇಶವಾಹಕ ಬಂದು “ಮಹಾರಾಜಾ! ಶುಭಸುದ್ದಿ. ಯುವರಾಜ ಉತ್ತರಕುಮಾರ ಹಸ್ತಿನೆಯ ಸಮಗ್ರ ಸೇನೆಯನ್ನು ಸೋಲಿಸಿ ಗೋವುಗಳನ್ನು ಬಿಡಿಸಿಕೊಂಡು ಬರುತ್ತಿದ್ದಾರೆ”
ಕೇಳಿದ ವಿರಾಟನಿಗೆ ಮಗನ ವಿಕ್ರಮ ವಿಜಯಗಾಥೆಯಿಂದ ಸ್ವರ್ಗಕ್ಕೆ ಮೂರೆ ಗೇಣು ಎಂಬ ರೀತಿ ಹರ್ಷೋತ್ಕರ್ಷವಾಯಿತು. ಬಹುವಿಧ ಬಹುಮಾನಗಳನ್ನು ಸುದ್ಧಿ ತಂದವನಿಗಿತ್ತು ಕಳುಹಿಸಿದನು.

ಆಗ ಕಂಕ “ಮಹಾರಾಜರೆ, ನಾನು ಆಗಲೇ ಹೇಳಿದೆನಲ್ಲವೆ? ಬ್ರಹನ್ನಳೆ ಜೊತೆಗಿದ್ದರೆ ಯಾವ ಬಲಾಢ್ಯ ಸೇನೆ ಬಂದರೂ ಹೆದರುವ ಅವಶ್ಯಕತೆಯಿಲ್ಲವೆಂದು”. ಕಂಕನ ಈ ಮಾತು ಕೇಳಿ ” ನನ್ನ ಮಗನ ಸಾಹಸ ಕಾರ್ಯವನ್ನು ಹಾಡಿ ಹೊಗಳುವ ಬದಲು ಆ ಷಂಡ, ನೃತ್ಯ ಪಾಠ ಮಾಡುವವನ್ನು ಅತಿಯಾಗಿ ಹೊಗಳುವೆಯಾ? ಉತ್ತರನ ಪೌರುಷದಿಂದಾದ ವಿಜಯಕೀರ್ತಿಯನ್ನು ಆ ನಪುಂಸಕನಿಗೆ ನೀಡುವೆಯಾ? ನಿನ್ನನ್ನು…” ಎಂದು ಅವುಡುಗಚ್ಚುತ್ತಾ ತಿರುಗಿ ಕೈಗೆ ಸಿಕ್ಕಿದ ಪಗಡೆಯ ಮಣೆಯಿಂದಲೆ ಕಂಕನ ಹಣೆಗೆ ಹೊಡೆದು ಬಿಟ್ಟನು. ಕಂಕನ ಲಲಾಟ ಒಡೆದು ರಕ್ತ ಚಿಮ್ಮಿತು. ಅದನ್ನು ಕಂಡ ಕೂಡಲೆ ಅಲ್ಲಿಯೆ ಇದ್ದ ಸೈರಂಧ್ರಿ ಓಡಿ ಹೋಗಿ, ತನ್ನ ಸೆರಗಿನ ತುದಿ ಹರಿದ ವಸ್ತ್ರದಿಂದ ರಕ್ತ ಸೋರದಂತೆ ಒತ್ತಿ ಹಿಡಿದಳು. ಕಂಕ “ಸೈರಿಸಿ ಸೈರಿಸಿ… ಸಹನೆಯಿರಲಿ… ಕ್ಷಮೆಯ ಮಹಾ ಧರ್ಮಗುಣ” ಎಂದನು. ನೋಡುತ್ತಿದ್ದ ವಿರಾಟನಿಗೆ – ಈ ಸೈರಂಧ್ರಿಗೆ ಏನು ಕಂಕನ ಮೇಲೆ ಇಷ್ಟು ಅಭಿಮಾನ ಅಕ್ಕರೆ? ಎಂದೆಣಿಸಿತಾದರೂ ಸುಮ್ಮನೆ ನೋಡುತ್ತಾ ನಿಂತುಬಿಟ್ಟ.

ಈ ಕ್ಷಣಕ್ಕೆ ಸರಿಯಾಗಿಯೆಆಸ್ಥಾನ ಬಾಗಿಲಿಗೆ ಉತ್ತರಕುಮಾರ ಮತ್ತು ಬ್ರಹನ್ನಳೆ ಬಂದು ಮುಟ್ಟಿದರು. ಸೈರಂಧ್ರಿ ಗಾಯವನ್ನು ಒತ್ತಿ ಹಿಡಿದಿದ್ದ ವಸ್ತ್ರವನ್ನು ಕಂಕನ ಕೈಗಿತ್ತು ಹಾಗೆಯೆ ಹಿಡಿಯುವಂತೆ ಹೇಳಿ, ಆಸ್ಥಾನ ದ್ವಾರ ಬಾಗಿಲಿನತ್ತ ಹೋದಳು. ಬ್ರಹನ್ನಳೆಯ ಎದುರು ತಲೆ ತಗ್ಗಿಸಿ ನಿಂತು ಗುಟ್ಟಿನ ಧ್ವನಿಯಲ್ಲಿ ವಿರಾಟ ಕಂಕನಿಗೆ ಹೊಡೆದ ವೃತ್ತಾಂತ ಹೇಳಿ, “ಧರ್ಮರಾಯ ಕ್ಷಮಿಸಿ ಸುಮ್ಮನುಳಿಯಲು ನಿರ್ದೇಶಿಸಿದ್ದಾನೆ” ಎಂದು ಹೇಳಿ ತಿರುಗಿ ಬಂದಳು. ವಿರಾಟ ಮತ್ತೆ ಸೈರಂಧ್ರಿಯ ವಿಚಿತ್ರ ಎನಿಸುವ ರೀತಿಯ ವರ್ತನೆಯನ್ನು ಗಮನಿಸುತ್ತಿದ್ದಾನೆ. ಇವಳೇಕೆ ಈ ರೀತಿ ವ್ಯವಹರಿಸುತ್ತಿದ್ದಾಳೆ ? ಸಂಶಯವಾಗುತ್ತಿದೆ ಈಗ ಅವನಿಗೆ.

ಒಂದು ವೇಳೆ ದ್ರೌಪದಿ ಅರ್ಜುನನಿಗೆ ಈ ಸಹನೆ, ಕ್ಷಮೆಯ ವಿಚಾರ ಹೇಳದಿರುತ್ತಿದ್ದರೆ ಅನಾಹುತವೆ ಆಗುತ್ತಿತ್ತು. ‘ರಣರಂಗದ ಹೊರಗೆ ಯಾರೆ ಆದರೂ, ಎಂದೂ ಧರ್ಮ ತಪ್ಪಿ ವ್ಯವಹರಿಸದ, ಸಾಧು ಸದ್ಗುಣಶೀಲವಂತನಾದ ಅಣ್ಣ ಧರ್ಮರಾಯನ ಮೈಯಿಂದ ಒಂದು ಹನಿ ರಕ್ತ ಬರುವಂತೆ ಹೊಡೆದರೆ, ಆ ಕ್ಷಣದಲ್ಲಿ ಅಂತಹವರನ್ನು ವಧಿಸುವ ಶಪಥ ಅರ್ಜುನನದ್ದು. ಅರ್ಜುನ ಕೋಪದಿಂದ ಕುದಿಯುತ್ತಿದ್ದರೂ ತಡೆದು ತಾಳ್ಮೆಯಿಂದ ನಿಂತುಕೊಂಡನು.

ಆಸ್ಥಾನ ಪ್ರವೇಶಿಸಿ ಉತ್ತರಕುಮಾರ ತನ್ನ ಪಿತಾಶ್ರಿ ವಿರಾಟನ ಬಳಿ ಬರುತ್ತಿದ್ದಂತೆ ಕಂಕನ ಹಣೆಗಾದ ಗಾಯ ನೋಡಿ, “ಅಯ್ಯೋ ಏನಾಯಿತು?” ಎಂದು ಕೇಳಿದನು. ವಿರಾಟ “ಈ ಕಂಕ ಯುದ್ದ ವಿಜಯ ಆ ನಾಟ್ಯಗುರುವಿನಂದಾಗಿ ಆಗಿದೆ ಎನ್ನುತ್ತಾನೆ. ಆ ಮಾತು ಕೇಳಿ ಬಂದ ಸಿಟ್ಟಿನಿಂದ ಹೊಡೆದುಬಿಟ್ಟೆ” ಎಂದನು.
“ಅಯ್ಯೋ! ಯಾರಾದರೂ ಬ್ರಾಹ್ಮಣೋತ್ತಮರಿಗೆ ಹೊಡೆಯಬಹುದೆ? ನಿಮಗೆ ಇಂತಹ ಧರ್ಮಾತಿಕ್ರಮಣಕ್ಕೆ ಅಧಿಕಾರ ಕೊಟ್ಟವರಾರು?” ಎಂದು ಸಿಡುಕುತ್ತಲೆ ಕೇಳಿದನು. ಈಗಲೆ ಅವರ ಕ್ಷಮೆ ಕೇಳಿ ನೀವು ಎನ್ನುತ್ತಾ ತಾನು ಕಂಕನ ಪಾದಗಳಿಗೆರಗಿ ನಮಿಸಿ “ಪೂಜ್ಯರೆ, ಏನೋ ಅರಿಯದೆ ಅಪರಾಧವಾಯಿತು. ಕರುಣಾಸಾಗರನೆ ನಮ್ಮನ್ನು ಕ್ಷಮಿಸಬೇಕು” ಎಂದು ಬೇಡಿಕೊಂಡನು. ಮಗನ ನಡವಳಿಕೆಯಿಂದ ಗೊಂದಲಕ್ಕೊಳಗಾದ ವಿರಾಟ ತಾನೂ ಕಂಕನಿಗೆ ನಮಿಸಿ “ಕ್ಷಮಿಸಬೇಕು ಕುಲೋತ್ತಮರೆ, ವಿಜಯದ ಉಲ್ಲಾಸದಿಂದ ಮನಮಾಡಿದ ಹರ್ಷದಲ್ಲಿದ್ದೆ. ಆ ಕ್ಷಣ ನಿಮ್ಮ ಮಾತೇಕೊ ಅಪಥ್ಯವಾಗಿ, ಧರ್ಮ ಮರೆತು ಆವರಿಸಿದ ಆವೇಶದಲ್ಲಿ ದುಡುಕಿ ನನ್ನಿಂದ ತಪ್ಪಾಯಿತು” ಎಂದು ಕ್ಷಮೆ ಕೇಳಿದನು. ಧರ್ಮರಾಯ”ಅಯ್ಯೋ ನಾನು ನಿಮ್ಮ ಈ ನಡೆಗೆ ಬೇಸರಿಸಿಕೊಳ್ಳಲಿಲ್ಲ. ಪುತ್ರ ಪ್ರೇಮಿಯಾದ ಅಪ್ಪನೋರ್ವ ಸಂಭ್ರಮಿಸಿ ಮಗನ ಸಾಧನೆಗೆ ಶ್ಲಾಘನೆ ಬಯಸುವುದು ಸ್ವಭಾವ ಸಹಜ. ಈ ಕಾರ್ಯ ಅಪರಾಧವಾಗದು, ಅಜ್ಞಾನದಿಂದ ಮಕ್ಕಳಿಂದಾಗುವ ಪ್ರಮಾದದಂತೆ ನಗಣ್ಯ. ವ್ಯಥೆಪಡಬೇಡಿ, ಅದೆಲ್ಲವನ್ನೂ ಮರೆತು ಅದ್ಬುತ ವಿಜಯದ ಸಂತಸದ ಸಮಯವನ್ನು ಸಂಭ್ರಮಿಸೋಣ” ಎಂದು ಹೇಳಿ ವಿಷಯವನ್ನು ತಿಳಿಗೊಳಿಸಿದನು.

ತುಸು ದೂರದಲ್ಲಿಯೆ ನಿಂತು ನೋಡುತ್ತಿದ್ದ ಸೈರಂಧ್ರಿ, ಬ್ರಹನ್ನಳೆಗೂ ಕಂಕನ ಮಾತಿನಿಂದ ಸಮಾಧಾನವಾಯಿತು. ವಿರಾಟ – ಉತ್ತರ ಕುಮಾರನಲ್ಲಿ ಉತ್ತರ ಗೋಗ್ರಹಣದ ಸಾಧನೆಯ ಬಗ್ಗೆ ಮಾತನಾಡುತ್ತಿದ್ದಾನೆ. ಇತ್ತ ಸೈರಂಧ್ರಿ ಔಷಧಿ ತಂದು ಕಂಕನ ಹಣೆಗಾದ ಗಾಯಕ್ಕೆ ಹಚ್ಚಿ ಶುಶ್ರೂಷೆ ಮಾಡುತ್ತಿದ್ದಾಳೆ. ವಿರಾಟರಾಯ ಮತ್ತೆ ಮತ್ತೆ ಸೈರಂಧ್ರಿಯ ಇಂದಿನ ನಡವಳಿಕೆಯನ್ನು ನೋಡುತ್ತಿದ್ದಾನೆ. ಇವಳೇಕೆ ಇಂದು ಹೀಗಾಗಿದ್ದಾಳೆ? ಎಂಬ ಸಂಶಯ ಬಲವಾಗತೊಡಗಿತು. ಅಷ್ಟಾಗುತ್ತಲ ತಂದೆಯ ಬಳಿಯಿದ್ದ ಉತ್ತರ ಕುಮಾರ ಬ್ರಹನ್ನಳೆಯ ಕಡೆ ನಡೆದು, ಕೈ ಮುಗಿದು ನಿಂತು “ನನ್ನ ತಂದೆಯಿಂದ ಅರಿಯದೆ ಆದ ಅಪರಾಧಕ್ಕಾಗಿ ಕ್ಷಮೆ ಬೇಡುತ್ತಿದ್ದೇನೆ” ಎಂದು ಪ್ರಾರ್ಥಿಸಿದನು. ಆಗ ಬ್ರಹನ್ನಳೆ ” ಪೆಟ್ಟು ಹೊಡೆಸಿಕೊಂಡವರು ಕ್ಷಮಿಸಿದ ಮೇಲೆ ಮತ್ತೇನೂ ದುಃಖಿಸುವ ವಿಚಾರ ಉಳಿದಿಲ್ಲ” ಎಂದು ಹೇಳಿ, “ಹೇ! ಯುವರಾಜಾ! ನಿಮ್ಮ ತಂಗಿಗಾಗಿ ನೀವು ಯುದ್ದ ಗೆದ್ದು ಬರುವಾಗ ತಂದಿರುವ ವಸ್ತ್ರಾಭರಣಗಳನ್ನು ನೀಡುವುದಿಲ್ಲವೆ?” ಎಂದು ಜ್ಞಾಪಿಸಿ ವಿಷಯಾಂತರಗೊಳಿಸಿದನು ಪಾರ್ಥ. , “ಹೋ! ಹೌದಲ್ಲವೆ! ಉತ್ತರಾ, ಇಗೋ ನಿನಗಾಗಿ ತಂದಿರುವ ವಿಶೇಷ ಉಡುಗೊರೆಗಳು” ಎಂದು ತನ್ನ ತಂಗಿಗೆ ನೀಡಿದನು.

ಇದೆಲ್ಲಾ ನಡೆದು ಮೂರನೆಯ ದಿನ ಪಂಚ ಪಾಂಡವರು ದ್ರೌಪದಿ ಸಮೇತರಾಗಿ, ಮುಂಜಾವದಲ್ಲಿ ಶುಚಿರ್ಭೂತರಾಗಿ ಮಡಿ ಶ್ವೇತ ವಸನಗಳನ್ನುಟ್ಟು, ತಮ್ಮ ದಿವ್ಯಾಯುಧಗಳನ್ನು ಧರಿಸಿ, ಅರಸನ ಓಲಗಕ್ಕಿಂತ ಮೊದಲು ಆಸ್ಥಾನದಲ್ಲಿ ರಾಜ ಮಹಾರಾಜರು ಆಸೀನರಾಗುವ ಸಿಂಹಾಸನಗಳಲ್ಲಿ ಅಲಂಕೃತರಾದರು. ರಾಜಾ ವಿರಾಟ ಓಲಗಸ್ಥನಾಗುವಾಗ ಸ್ವಯಂ ಪ್ರಭೆಯಿಂದ ಕಂಗೊಳಿಸುತ್ತಾ ದೇವತೆಗಳಂತೆ ಕಾಣುತ್ತಿರುವ ಇವರ್ಯಾರಿರಬಹುದು ನನ್ನ ಆಸ್ಥಾನದಲ್ಲಿ? ಎಂದು ಗೊಂದಲಕ್ಕೊಳಗಾಗಿ ದಿಟ್ಟಿಸಿ ನೋಡತೊಡಗಿದನು. ಇವರೆಲ್ಲರನ್ನೂ ಎಲ್ಲೊ ನೋಡಿದಂತಿದೆ! ಸ್ಮರಣೆಯಾಗತೊಡಗಿತು. ಧರ್ಮರಾಯನನ್ನು ನೋಡಿದರೆ ಹಣೆಯಲ್ಲಿ ಗಾಯವಿದೆ, ಮುಖ ಕಂಕನಂತೆ ಶೋಭಿಸುತ್ತಿದೆ, ಕಂಕನೆಲ್ಲಿ ಎಂದು ಕಣ್ಣು ತಿರುಗಿಸಿ ನೋಡಿದರೆ ಕಂಕನಿಲ್ಲ. ಅರೇ! ಏನಿದು? ಯಾರಾಗಿರಬಹುದು ಈ ಮಹಿಮಾನ್ವಿತರು? ಎಂದು ಆತಂಕಕ್ಕೊಳಗಾಗುತ್ತಿರುವಾಗ, ಉತ್ತರಕುಮಾರ ಬಂದು ತನ್ನ ಪಿತನಿಗೆ ಸರ್ವ ವಿಚಾರವನ್ನೂ ವಿಸ್ತರಿಸಿ ವಿವರಿಸಿ, ಇವರು ನಮ್ಮ ಆಸ್ಥಾನದಲ್ಲಿ ಅಜ್ಞಾತರಾಗಿ ಇದ್ದ ಪಾಂಡವರು ಮತ್ತು ಮಾತೆ ದ್ರೌಪದಿ ದೇವಿ ಎಂದು ಪರಿಚಯ ಹೇಳಿದನು. “ಪಾಂಡವರೇ! ಇವರು?” ಉದ್ಘಾರದೊಂದಿಗೆ ವಿರಾಟನ ಕೈಕಾಲುಗಳು ಒಮ್ಮೆಗೆ ನಡುಗಿದವು. ಎದ್ದು ನಿಂತು ನಮಸ್ಕರಿಸಿ, ರಾಜೋಚಿತ ಸತ್ಕಾರಗಳನ್ನು ಮಾಡಿ ಬಹುವಿಧದಿಂದ ಸನ್ಮಾನಿಸಿದನು. ಬಳಿಕ “ಚಕ್ರವರ್ತಿ ಧರ್ಮರಾಯಾ! ನಿಮ್ಮನ್ನು ಗುರುತಿಸುವಲ್ಲಿ ನಾನು ವಿಫಲನಾದೆ. ಸೇವಕನಾಗಿ ಸೇವೆ ಮಾಡಿಸಿದೆ. ಅರಿಯದೆ ನನ್ನಿಂದಾದ ಘೋರ ಅಪರಾಧಕ್ಕಾಗಿ ಕ್ಷಮಿಸಬೇಕು” ಎಂದು ಬೇಡಿಕೊಂಡನು. ಆಗ ಧರ್ಮರಾಯ “ಮಹಾರಾಜಾ, ಕಾಲವೇ ಹಾಗಿತ್ತು, ಮತ್ತು ನಾವು ಹಾಗೆಯೆ ಇರಬೇಕಾದ ಅನಿವಾರ್ಯತೆ ಬಂದೊದಗಿತ್ತು. ನಿನ್ನನ್ನು ವಂಚಿಸಿ ನಾವು ಇಲ್ಲಿದ್ದೆವು ಎಂದು ಭಾವಿಸಬೇಡ. ವ್ರತದಂತೆ ಒಂದು ವರ್ಷಕಾಲ ನಾವು ಹಾಗೆ ಇರಬೇಕಾದ ಸ್ಥಿತಿ ನಿರ್ಮಾಣವಾದದ್ದರಿಂದ ಇದೆಲ್ಲಾ ಆಗಿ ಹೋಯಿತು. ನಮಗೆ ಉದ್ಯೋಗ, ಆಶ್ರಯ, ಊಟೋಪಚಾರ ನೀಡಿ ಸಲಹಿದ ನಿನ್ನ ರಾಜಾಶ್ರಯಕ್ಕೆ ನಾವು ಋಣಿಗಳು ಆಗಿದ್ದೇವೆ” ಎಂದನು.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page