ಭಾಗ -16
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೬ ಮಹಾಭಾರತ
ಹೀಗೆ ದಾಸಿಯಾಗಿ ಬಂದ ಶರ್ಮಿಷ್ಠೆ ಹೆಜ್ಜೆ ಹೆಜ್ಜೆಗೂ ದೌರ್ಜನ್ಯ, ಅವಮಾನ, ಶೋಷಣೆಗಳನ್ನು ಅನುಭವಿಸಬೇಕಾಯಿತು. ಆಕೆ ಈ ರೀತಿ ಶೋಚನೀಯ ಯಾತನಾಮಯ ಬಾಳು ತನ್ನದಾಗಬಹುದು ಎಂದು ಮೊದಲೇ ಊಹಿಸಿದ್ದರಿಂದ ಸಹಿಸಿಕೊಳ್ಳುತ್ತಿದ್ದಳು. ಹೀಗೆ ಕಾಲ ಕಳೆಯುತ್ತಿರಲು ದೇವಯಾನಿ ಗರ್ಭಿಣಿಯಾದಳು. ರಾಜಾ ಯಯಾತಿಯೂ ಬಹಳ ಸಂತಸಪಟ್ಟನು.
ಒಂದು ದಿನ ರಾಜಾ ಯಯಾತಿ ಉಪವನದಲ್ಲಿ ತಿರುಗುತ್ತಿದ್ದಾಗ ಶರ್ಮಿಷ್ಠೆ ಮಹಾರಾಣಿ ದೇವಯಾನಿಗೆ ಹೂವುಗಳನ್ನು ಕೊಯ್ಯುತ್ತಿದ್ದಳು. ದೂರದಿಂದ ಗಮನಿಸಿ ಗುರುತಿಸಿದ ರಾಜಾ ಯಯಾತಿ, ಜನ್ಮತಃ ರಾಜ ಕುವರಿಯಾದ ಶರ್ಮಿಷ್ಠೆಯ ದೇಹ ಸಿರಿಗೆ, ಗಾಂಭೀರ್ಯತೆಗೆ ಮನಸೋತು ಬಳಿ ಬಂದನು. ಶರ್ಮಿಷ್ಠೆಯನ್ನು ಕರೆದು ಮಾತನಾಡಿಸಿ, ನೀನು ದಾಸಿಯಾಗಿರಬಾರದಿತ್ತು ಎಂದನು. ಆ ಮಾತನ್ನು ಕೇಳಿ, ಶರ್ಮಿಷ್ಠೆ – ತಾನು ದಾಸಿಯಲ್ಲ, ದಾಸಿಯಾಗಿ ಮಾಡಿಕೊಂಡದ್ದು ಎಂದಳು. ಈ ಮಾತನ್ನು ಕೇಳಿದ ರಾಜಾ ಯಯಾತಿ- ಹೌದು, ಪೂರ್ವ ವೃತ್ತಾಂತ ನನಗೂ ತಿಳಿದಿದೆ. ಕೇವಲ ಒಂದು ಸೀರೆಯ ಕ್ಷುಲ್ಲಕ ನೆಪ ಮುಂದಿರಿಸಿ ಈ ರೀತಿಯ ಹಗೆ ಸಾಧನೆ ಮಾಡಬಾರದಿತ್ತು ಎಂದನು. ಇದನ್ನು ಕೇಳಿದ ಶರ್ಮಿಷ್ಠೆ : ಮಹಾರಾಜ, ಸೀರೆಯ ಪ್ರಕರಣ ಕೇವಲ ನೆಪ ಮಾತ್ರ. ಅದಕ್ಕೆ ಹಿನ್ನೆಲೆಯ ಕಥೆಯಿದೆ. ನಾನು ಮತ್ತು ದೇವಯಾನಿ ಬಹಳ ಆತ್ಮೀಯ ಮಿತೃತ್ವ ಹೊಂದಿದ್ದೆವು. ಆ ವಿಚಾರವನ್ನು ನಿಮಗೆ ಹೇಳುವೆ. ಆದರೆ ಇಲ್ಲಿ ಬೇಡ ಎಂದು ತುಸುದೂರ ಕರೆದು ಕೊಂಡು ಹೋಗಿ ಒಂದು ಕಲ್ಲಿನ ಮೇಲೆ ತಾನು ಕೊಯ್ದು ಸಂಗ್ರಹಿಸಿದ ಹೂಗಳನ್ನು ಹಾಸಿ ಕುಳ್ಳಿರಿಸಿದಳು. ಪಾದದ್ವಯಗಳನ್ನು ಕೈಯಿಂದ ಒತ್ತುತ್ತಾ ಕಣ್ಣೀರು ಸುರಿಸಿದಳು. ರಾಜಾ, ನಾನು ಮಿತೃತ್ವಕ್ಕೆ ದ್ರೋಹ ಬಗೆಯಲಾರೆ. ಹಾಗೆಂದು ಈ ಸತ್ಯವನ್ನು ನಿಮಗೆ ಹೇಳಿ, ನನ್ನ ಮೇಲೆ ಹಗೆ ಸಾರುತ್ತಿರುವ ಮಹಾರಾಣಿಯ ವಿರುದ್ಧ ಪ್ರತಿಕಾರ ತೀರಿಸುವ ಉದ್ದೇಶವೂ ನನಗಿಲ್ಲ. ಹಾಗಾಗಿ ಈ ಸತ್ಯ ತಿಳಿದ ನಂತರ ಮಹಾರಾಣಿ ಹಾಗು ನನಗೆ ಇಬ್ಬರಿಗೂ ರಕ್ಷಣೆ ಕೊಡುವಿರಿ ಎಂದಾದರೆ ಆ ವಿಚಾರ ನಾನು ಹೇಳಬಹುದು ಎಂದು ರಾಜನ ಪಾದಗಳನ್ನು ಮೃದುವಾಗಿ ಶರ್ಮಿಷ್ಠೆ ಒತ್ತುತ್ತಾ.. ಒತ್ತುತ್ತಾ.. ಇರುವಾಗ ಆಕೆಯ ಸ್ಪರ್ಶ ರಾಜನಿಗೆ ಏನೋ ಒಂದು ತರಹದ ಹಿತ ಭಾವನೆಗಳನ್ನು ನೀಡುತ್ತಿತ್ತು. ಆದರೂ ಸಹಿಸಿ, ಸತ್ಯ ಸಂಗತಿ ತಿಳಿಯುವ ಕಾತರದಿಂದ ಮನದೊಳಗಿನ ಕಾಮನೆ, ಭಾವನೆಗಳನ್ನು ನಿಯಂತ್ರಿಸಿದ. ಶರ್ಮಿಷ್ಠೆಯ ಬೇಡಿಕೆಯಂತೆ ಒಪ್ಪಿ ಇಬ್ಬರಿಗೂ ರಕ್ಷಣೆ ನೀಡುತ್ತೇನೆ ಎಂದು ಅಭಯ ನೀಡಿದ.
ಶರ್ಮಿಷ್ಠೆ ಪೂರ್ವ ವೃತ್ತಾಂತ ಕಥೆ ಹೇಳಲಾರಂಭಿಸಿದಳು. ಶುಕ್ರಾಚಾರ್ಯರು ನಮ್ಮ ಗುರುಗಳು. ಮೃತ ಸಂಜೀವಿನಿ ವಿದ್ಯೆಯ ಮುಖೇನ ನಮ್ಮ ರಕ್ಕಸ ಕುಲದ ಮೃತ ವೀರರನ್ನು ಪುನರಪಿ ಬದುಕಿಸುತ್ತಿದ್ದರು. ಈ ರಕ್ಷಣೆ ದೇವತೆಗಳಿಗೆ ತಲೆ ನೋವಾಗಿ ಪರಿಣಮಿಸಿತ್ತು. ಇದೇ ಸಂದರ್ಭ ದೇವಗುರುಗಳ ಪುತ್ರ ‘ಕಚ’ ಎಂಬವನು ಈ ವಿದ್ಯೆಯನ್ನು ಶುಕ್ರಾಚಾರ್ಯರಿಂದ ಕಲಿಯುವ ಉದ್ದೇಶವಿರಿಸಿ ಅವರ ಆಶ್ರಮ ಸೇರಿದ್ದನು. ಶುಕ್ರಾಚಾರ್ಯರಿಗೆ ಅವರ ಮಗಳ ಮೇಲೆ ಅತೀವ ಅಕ್ಕರೆ ಇದ್ದ ಕಾರಣ, ಕಚನಿಗೆ ತನ್ನ ಮಗಳನ್ನು ಗೌರವದಿಂದ ಕಾಣಬೇಕು. ಯಾವುದೇ ರೀತಿಯಲ್ಲಿ ಅನಾದರ ಮಾಡಬಾರದೆಂದು ಅಪ್ಪಣೆ ಮಾಡಿದ್ದರು. ಕಚನೂ ಆಜ್ಞಾನುವರ್ತಿಯಾಗಿ ಅಷ್ಟೇ ನಿಷ್ಠೆಯಿಂದ ಗುರುಸೇವೆ ಮಾಡುತ್ತಿದ್ದ. ಆದರೆ ತಾನು ಬಂದ ಮೃತ ಸಂಜೀವಿನಿ ವಿದ್ಯೆ ಸಂಪಾದಿಸುವ ಕುರಿತು ಪ್ರಸ್ತಾಪಿಸಿರಲಿಲ್ಲ. ಇತ್ತ ದೇವಯಾನಿ ತನಗರಿವಿಲ್ಲದಂತೆ ಕಚನ ಮೇಲೆ ಒಲವು ತಳೆದಿದ್ದಳು. ಸಾಮಿಪ್ಯ ಬಯಸುತ್ತಿದ್ದಳು. ಹೀಗೆ ದಿನಗಳು ಕಳೆಯುತ್ತಿರಲು ಕಚನು ಗುರುಗಳಿಂದ ಮೃತ ಸಂಜೀವಿನಿ ವಿದ್ಯೆ ಕಲಿಯಲು ಬಂದಿರುವ ಉದ್ದೇಶವರಿತ ನಮ್ಮ ಕಡೆಯ ರಕ್ಕಸ ವೀರರು ಸಮಯ ಸಾಧಿಸಿ, ಆತ ಕಾರ್ಯನಿಮಿತ್ತ ಆಶ್ರಮ ತೊರೆದು ಹೊರಬಂದು ಕಾನನ ಮಧ್ಯೆ ಇರಬೇಕಾದರೆ ಆತನನ್ನು ವಧಿಸಿದರು. ದೇವಯಾನಿ ಕಚನನ್ನು ಕಾಣದೆ ಕಂಗಾಲಾಗಿ, ತನಗೆ ಆತ ಬೇಕೆಂದು ಆಕೆಯ ತಂದೆ ಶುಕ್ರಾಚಾರ್ಯರಲ್ಲಿ ದುಃಖಿತಳಾಗಿ ಕಾಡಿ ಬೇಡಿದಳು. ಆಗ ಸಂಜೀವಿನಿ ಮಂತ್ರಬಲದಿಂದ ಸಾಯಿಸಲ್ಪಟ್ಟಿದ್ದ ಕಚನನ್ನು ಬದುಕಿಸಿದರು. ಹೀಗೆ ಕೆಲವು ಬಾರಿ ನಮ್ಮವರಿಂದ ಕಚ ವಧಿಸಲ್ಪಟ್ಟರೂ ಪುನರಪಿ ಇದೇ ರೀತಿ ಘಟನೆಗಳು ಪುನರಾವರ್ತನೆ ಆಗುತ್ತಿತ್ತು. ಕಚ ಮತ್ತೆ ಮತ್ತೆ ಬದುಕಿ ಬರುತ್ತಿದ್ದ. ಇದನ್ನರಿತ ರಾಕ್ಷಸ ವೀರರು ತಂತ್ರಾಲೋಚನೆ ಮಾಡಿ ಕಚನನ್ನು ಕೊಂದು ಸುಟ್ಟು ಹಾಕಿದರು. ಶೇಷ ಬೂದಿಯನ್ನು ಪಾನೀಯದಲ್ಲಿ ಕಲಸಿದರು. ಸಂದರ್ಭ ಸೃಷ್ಟಿಸಿ ಅದನ್ನು ಶುಕ್ರಾಚಾರ್ಯರು ಕುಡಿಯುವಂತೆ ಮಾಡಿದರು. ಹೀಗಾದ ಬಳಿಕ ಕಚನನ್ನು ಎಲ್ಲೂ ಕಾಣದ ದೇವಯಾನಿ ಮತ್ತೆ ಹಠ ಹಿಡಿದು ಕಚನನ್ನು ತೋರಿಸುವಂತೆ ತಂದೆಯನ್ನು ಒತ್ತಾಯಿಸ ತೊಡಗಿದಳು. ಆಗಲೂ ಕಚ ಮೃತನಾಗಿರುವುದನ್ನು ಅರಿತ ಶುಕ್ರಾಚಾರ್ಯರು ಸಂಜೀವಿನಿ ಮಂತ್ರ ಪ್ರಯೋಗ ಮಾಡಿದರು. ಕಚನು ಶುಕ್ರಾಚಾರ್ಯರ ಹೊಟ್ಟೆಯೊಳಗಿಂದ ಮಾತನಾಡತೊಡಗಿದ- “ಗುರುಗಳೇ, ನಾನು ಹೇಗೆ ಹೊರಬರಲಿ?” ಆಗ ಶುಕ್ರಾಚಾರ್ಯರಿಗೆ ವಿಸ್ಮಯವಾಗಿ ಹೀಗಾಗಲು ಕಾರಣ ಏನೆಂದು ದಿವ್ಯದೃಷ್ಟಿಯಿಂದ ನೋಡಿದರು. ಇದು ನಮ್ಮವರೆ ಆದ ರಾಕ್ಷಸರ ಕೃತ್ಯ, ಅದರ ಪರಿಣಾಮವನ್ನೂ ಅರಿತ ಗುರುಗಳು, ಯೋಚಿಸಿ ಒಂದು ತೀರ್ಮಾನಕ್ಕೆ ಬಂದರು. ಮೃತ ಸಂಜೀವಿನಿ ವಿದ್ಯೆಯನ್ನು ಕಚನಿಗೆ ಹೊಟ್ಟೆಯೊಳಗಿರುವಂತೆಯೇ ಉಪದೇಶಿಸಿದರು. ಹಾಗೂ ನಿರ್ದೇಶನ ನೀಡಿದರು, ಏನೆಂದರೆ ಕಚ ಇವರ ಹೊಟ್ಟೆ ಸೀಳಿ ಹೊರಬರಬೇಕು. ಆಗ ಸಾಯಲ್ಪಡುವ ಶುಕ್ರಾಚಾರ್ಯರನ್ನು ಕಚ ಆ ಮಂತ್ರಬಲದಿಂದ ಬದುಕಿಸಬೇಕು. ಶುಕ್ರಾಚಾರ್ಯರ ನಿರ್ದೇಶನದಂತೆ ಅವರ ಹೊಟ್ಟೆ ಸೀಳಿಕೊಂಡು ಕಚ ಹೊರ ಬಂದನು. ಹೊಟ್ಟೆ ಸೀಳಲ್ಪಟ್ಟ ಗುರು ಶುಕ್ರಾಚಾರ್ಯರೇ ಈಗ ಮೃತರಾಗಿದ್ದಾರೆ.
ಮುಂದುವರಿಯುವುದು…..
✍🏻ಭರತೇಶ್ ಶೆಟ್ಟಿ ಎಕ್ಕಾರ್



















