28.9 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 21

ಭರತೇಶ್ ಶೆಟ್ಟಿ, ಎಕ್ಕಾರ್

ಹಿಂದೊಮ್ಮೆ ದೇವತೆಗಳೆಲ್ಲಾ ಕೂಡಿ ನೈಮಿಷಾರಣ್ಯದಲ್ಲಿ ಮಹತ್ತರವಾದ ಯಜ್ಞ ಕೈಗೊಂಡಿದ್ದರು. ಯಮನೇ ಪ್ರಧಾನ ಸ್ಥಾನಕ್ಕೆ ನಿಯುಕ್ತನಾಗಿದ್ದನು. ದೇವತೆಗಳೂ ಭೂಮಿಗಿಳಿದು ಬಂದು ಈ ಕೆಲಸದಲ್ಲಿ ಸೇರಿಕೊಂಡದ್ದರಿಂದ ಭೂಮಿಯೇ ಸ್ವರ್ಗವಾಗಿತ್ತು. ಈ ಯಾಗ ಬಹುಕಾಲ ಸಾಗಿದ್ದು, ಯಮರಾಜ ಯಜ್ಞದಲ್ಲೇ ವ್ಯಸ್ಥನಾಗಿರಬೇಕಾಗಿದ್ದರಿಂದ ಭೂಲೋಕದ ಜನರಿಗೆ ಮರಣ ಭಯ ಯಾಗ ಸಮಾಪ್ತಿಯವರೆಗೆ ದೂರವಾಗಿ, ಹೆಚ್ಚುಕಾಲ ಬದುಕುವ ಅವಕಾಶ ಒದಗಿಸಿದ ಯಾಗವೆಂದೂ ಖ್ಯಾತಿ ಪಡೆದಿತ್ತು. ಈ ಯಾಗದ ಸುದ್ದಿ ಕೇಳಿ ಹಿಂದಣ ಮನ್ವಂತರದ ಇಂದ್ರ ( ಇಂದ್ರ ಎನ್ನುವುದು ಪದವಿ. ರಾಷ್ಟ್ರಪತಿ, ಪ್ರಧಾನಿ ಇರುವ ಹಾಗೆ) ಮನ್ವಂತರಕ್ಕೊಬ್ಬ ಇಂದ್ರ ಬದಲಾಗುತ್ತಾನೆ) ‘ತೇಜಸ್ವಿ’ ಎಂಬ ಹೆಸರುಳ್ಳ ಇಂದ್ರ ಈ ಯಾಗ ನೋಡಲು ಉತ್ಸುಕನಾಗಿ ಬರುತ್ತಿರಬೇಕಾದರೆ, ಗಂಗಾನದಿಯಲ್ಲಿ ತೇಲಿ ಬರುತ್ತಿರುವ ಬಂಗಾರದ ಕಮಲದ ಹೂವುಗಳನ್ನು ನೋಡುತ್ತಾನೆ. ಕುತೂಹಲಿಗನಾಗಿ ಈ ಹೂವುಗಳು ಎಲ್ಲಿಂದ ಬರುತ್ತಿವೆ? ಎಂದು ನದಿಯ ಹರಿವಿನ ವಿರುದ್ಧ ದಿಕ್ಕಿಗೆ ಮುಖಮಾಡಿ ಅಂದರೆ ನದಿ ಮೂಲದತ್ತ ದಂಡೆಯ ಬದಿಯಿಂದ ನಡೆದು ಸಾಗುತ್ತಾನೆ. ಅರೇ ! ಏನಾಶ್ಚರ್ಯ ಅಲ್ಲೊಬ್ಬ ದಿವ್ಯಾಂಗನೆ ಇದ್ದಾಳೆ. ಅವಳ ಕಣ್ಣೀರ ಹನಿಗಳು ನದಿಯ ನೀರಿಗೆ ಬಿದ್ದಾಕ್ಷಣ ಈ ರೀತಿ ಚಿನ್ನದ ತಾವರೆಗಳಾಗಿ ತೇಲಿ ಹೋಗುತ್ತಿದ್ದವು. ತೇಜಸ್ವಿ ನಾಮಕ ಮಾಜಿ ಇಂದ್ರನಿಗೆ ವಿಸ್ಮಯವಾಗಿ ಅವಳನ್ನು ಮಾತಾಡಿಸಲು ಪ್ರಯತ್ನಿಸುತ್ತಾನೆ. ಆಗ ಸಂಜ್ಞೆಯ ಮೂಲಕ ತನ್ನ ಜೊತೆ ಬರಲು ಸೂಚಿಸುತ್ತಾಳೆ. ಅಂತೆಯೆ ಅವನು ಅವಳನ್ನು ಹಿಂಬಾಲಿಸಿ ಹೋಗುತ್ತಾನೆ.

ಗಿರಿಯ ಶಿಖರ ಪ್ರಾಂತದಲ್ಲಿ ದಂಪತಿಗಳಿಬ್ಬರು ಕಲ್ಲು ಮಂಚದ ಮೇಲೆ ಆಸೀನರಾಗಿ ಚದುರಂಗದಾಟ ಆಡುತ್ತಿದ್ದರು. ಈತನನ್ನು ಕರೆತಂದವಳು ಅವರ ಬಳಿ ಹೋಗಿ ನಿಂತಳು. ತೇಜಸ್ವಿ ತುಸು ಹೊತ್ತು ಕಾದು, ನಿಂತರೂ ಯಾರೂ ಮಾತನಾಡಲಿಲ್ಲ. ಇವರು ನನ್ನನ್ನು ಉಪೇಕ್ಷಿಸುತ್ತಿದ್ದಾರೆ. ಇನ್ನು ಇಲ್ಲಿ ತನಗೇನು ಕೆಲಸ ಎಂದು ಭಾವಿಸುತ್ತಿದ್ದಂತೆ, ಆಟವಾಡುತ್ತಿದ್ದ ಈರ್ವರಲ್ಲಿ ಪುರುಷ ಇವನತ್ತ ದೃಷ್ಟಿ ಹರಿಸಿದನು – ಅಷ್ಟರಲ್ಲಿ ತೇಜಸ್ವಿಯ ಸರ್ವ ಚೈತನ್ಯವೂ ಉಡುಗಿ ಹೋದಂತೆಣಿಸಿತು. ಕುಸಿದು ಹೋದನು – ಕುಸಿದಲ್ಲೇ ಕೆಳಗೆ ಬಿದ್ದು ಯಾವುದೋ ಒಂದು ಗುಹೆಯೊಳಗೆ ಸೇರಿ ಹೋದನು. ಅಲ್ಲಿ ಇನ್ನೂ ನಾಲ್ವರು ಮೊದಲೇ ತೇಜಹೀನರಾಗಿ ಬಿದ್ದಿದ್ದರು. ಕೆಲವು ಕಾಲದ ನಂತರ ತೇಜಸ್ವಿಗೆ ಪ್ರಜ್ಞೆ ಬಂತು. ಏನೋ ಭಗವಂತನ ಲೀಲೆ ಎಂದು ಮನಗಂಡು ಅಲ್ಲಿದ್ದ ಇತರ ನಾಲ್ವರನ್ನೂ ಮೈದಡವಿ ಎಬ್ಬಿಸಿದನು. ಐವರೂ ಜೊತೆ ಸೇರಿ ಒಂದೇ ಸವನೆ ಪರಮ ಶಿವನನ್ನು ಕುರಿತು ಧ್ಯಾನಿಸತೊಡಗಿದರು. ಕಾಲಾಂತರದಲ್ಲಿ ಸುಪ್ರೀತನಾದ ಶಿವನು ಮೈದೋರಿದನು. ಶಿವನ ಅನುಗ್ರಹ ಮಾತ್ರದಿಂದಲೇ ಅವರೈವರಲ್ಲೂ ಸುಪ್ತ ಪ್ರಜ್ಞೆ ಜಾಗೃತವಾಯಿತು. ವಿವೇಕ, ಸುಜ್ಞಾನ ಕೂಡಿಬಂದು ಸದಾಶಿವನನ್ನು ಅನನ್ಯ ಸ್ತೋತ್ರ ಮಾಡುತ್ತಾರೆ. ಆ ಐದು ಮಂದಿಯೂ ಹಿಂದಿನ ಮನ್ವಂತರಗಳಲ್ಲಿ ಇಂದ್ರ ಪದವಿ ಅಲಂಕರಿಸಿ ಸ್ವರ್ಗವನ್ನಾಳಿದ್ದ ‘ವಿಶ್ವಭುಕ್’, ‘ಭೂತಧಾಮ’, ‘ಶಿಬಿ’, ‘ಶಾಂತಿ’, ಮತ್ತು ‘ತೇಜಸ್ವಿ’ ಎಂಬ ಹೆಸರಿನ (ಮಾಜಿ ಇಂದ್ರರು) ಮಹಾನುಭಾವರಾಗಿದ್ದರು. ಅವರ ಅಧಿಕಾರದ ಅವಧಿ ಅಂದರೆ ಒಂದೊಂದು ಮನ್ವಂತರ ಸಂದು ಹೋದಾಗ ಶಿವಸಂಕಲ್ಪದಂತೆ ಈ ಐದೂ ಮಂದಿ ಸೆಳೆಯಲ್ಪಟ್ಟು ತೇಜಹೀನ ಸ್ಥಿತಿಯಲ್ಲಿ ನಿಶ್ಯಕ್ತರಾಗಿ ಈ ಗುಹೆಯಲ್ಲಿ ಬಿದ್ದಿದ್ದರು. ಸದ್ಯ ಈ ಸ್ಥಿತಿಯಲ್ಲಿ ಈ ಐವರು ಗೈದ ಅನನ್ಯ ಸ್ತೋತ್ರದಿಂದ ಸಂತುಷ್ಟನಾದ ಪರಮೇಶ್ವರನು ಆ ಐದೂ ಮಂದಿ ಗತ ಮನ್ವಂತರದ ಇಂದ್ರರನ್ನು ಕುರಿತು ನೀವೈದೂ ಮಂದಿ ಈಗ ಪರಿಶುದ್ಧರಾದಿರಿ. ಮುಂದೆ ನೀವೈದು ಮಂದಿಯೂ ದೇವತಾ ಶಕ್ತಿಯಿಂದ ಭೂಮಿಯಲ್ಲಿ ಹುಟ್ಟಬೇಕಾಗಿದೆ. ಧರ್ಮಪ್ರಜ್ಞೆ, ದೇಹಬಲ, ಸಮರಸಾಹಸ, ಶೌರ್ಯ, ಹಾಗು ಸುಜ್ಞಾನ ಪರಿಪೂರ್ಣರಾಗಿ ಆವಿರ್ಭವಿಸಿರಿ. ನನ್ನ ‘ಸದ್ಯೋಜಾತ’, ‘ವಾಮದೇವ’, ‘ತತ್ಪುರುಷ’, ‘ಅಘೋರ’, ಈಶಾನ ಗಳೆಂಬ ಪಂಚಮುಖಗಳಿಂದ ಒಬ್ಬೊಬ್ಬರಿಗೆ ಒಂದೊಂದು ಮುಖದ ದಿವ್ಯ ಶಕ್ತಿ ಸಂಪ್ರಾಪ್ತವಾಗಲಿ.

ಪರ್ವತಾಗ್ರದಲ್ಲಿ ಕಣ್ಣೀರು ಸುರಿಸುತ್ತಿದ್ದ ದಿವ್ಯಾಂಗನೆ ‘ಸುದತಿ’. ಈಗಾಗಲೇ ಶಿವೆಯಿಂದ ಅನುಗ್ರಹಿತಳಾಗಿದ್ದಾಳೆ. ಶಕ್ತಿ ದೇವತೆ ಪಾರ್ವತಿ ತನ್ನಂಶದ ಒಂದು ಶಕ್ತಿಯನ್ನೂ ಅನುಗ್ರಹಿಸಿರುತ್ತಾಳೆ. ಕಾಲಾಂತಾರದಲ್ಲಿ ನೀವು ಭೂಮಿಯಲ್ಲಿ ಹುಟ್ಟಿಕೊಂಡಾಗ ನಿಮಗೆ ಪತ್ನಿಯಾಗಿ ಒದಗಿ ಬರುತ್ತಾಳೆ. ನಿಮ್ಮಿಂದ ಮುಂದೆ ಯುಗಧರ್ಮ ಪಾಲನೆಗೆ ಪೂರಕ ಕಾರ್ಯವಾಗಲಿದೆ. ಶುಭವಾಗಲಿ ಎಂದು ಅನುಗ್ರಹಿಸಿ ಅಂತರ್ಧಾನನಾದ ಶಿವ ಪರಮಾತ್ಮ.

( ಈ ಐವರೇ ಮುಂದೆ ಮಹಾಭಾರತದ ಐವರು ಪಾಂಡವರಾಗಿ ಹುಟ್ಟು ಪಡೆಯುತ್ತಾರೆ. )

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page