29.1 C
Udupi
Friday, April 24, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 182

ಭರತೇಶ್ ಶೆಟ್ಟಿ ಎಕ್ಕಾರ್

ಕಡು ದುಃಖದಿಂದ ಮನೆಗೆ ಬಂದ ವಿದುರನಿಗೆ ತಡೆಯಲಾಗದ ವೇದನೆ. ತನ್ನ ಸ್ವಾರ್ಥಕ್ಕಾಗಿ ಅರೆಕ್ಷಣವೂ ಏನನ್ನೂ ಮಾಡದ, ಯೋಚಿಸದ ನಾನು “ಗರತಿಯಲ್ಲದ ಸತಿ” ಎಂದೂ “ಕೀಳು ಮನಸ್ಸಿನವನು”, “ಹಸ್ತಿನೆಗೆ ಹಾಳು ಬಯಸುವವನು” ಎಂಬ ತುಚ್ಚ ಭಾವದ ನುಡಿಗಳನ್ನು ಮಹಾರಾಜನ ಬಾಯಿಯಿಂದ ಪ್ರತ್ಯಕ್ಷವಾಗಿ ಕೇಳ ಬೇಕಾಗಿ ಬಂದದ್ದು, “ಹೊರಟು ಹೋಗು ಇಲ್ಲಿಂದ” ಎಂಬ ಬಹಿಷ್ಕಾರದ ಉಚ್ಚಾಟನೆ ನನಗಾದ ಮೇಲೆ ನಾನಿಲ್ಲಿರಬೇಕೆ? ಹೀಗೆ ರಾತ್ರಿ ಪೂರ್ತಿ ಯೋಚಿಸುತ್ತಾ ನಿದ್ದೆಯನ್ನು ಮಾಡದೆ ಒದ್ದಾಡುತ್ತಾ ಕಳೆದನು.

ಮರುದಿನ ಮುಂಜಾವ ತನ್ನ ಪತ್ನಿ ಪಾರಸವಿ ಹಾಗೂ ಅತ್ತಿಗೆ ಕುಂತಿದೇವಿಯನ್ನು ಕರೆದು ನಡೆದ ಸಂಪೂರ್ಣ ವೃತ್ತಾಂತ ವಿವರಿಸಿದನು. ನಂತರ ಬೇಕು ಬೇಕಾದ ಭದ್ರತೆ, ಸೌಕರ್ಯಗಳ ವ್ಯವಸ್ಥೆಯನ್ನು ತನ್ನ ಮನೆಗೆ ಒದಗಿಸಿದನು. ಆ ಬಳಿಕ ಕುಂತಿಯ ಬಳಿ ಬಂದು “ಕೆಲದಿನಗಳ ಕಾಲ ಪಾಂಡವರ ಜೊತೆ ಇರುವ ಮನಸ್ಸಾಗಿದೆ. ಧರ್ಮರಾಜನ ಜೊತೆ ಅಗತ್ಯವಾಗಿ ಧರ್ಮ ಜಿಜ್ಞಾಸೆ ನಿರತನಾಗಿದ್ದು ಮನದ ಗೊಂದಲಗಳನ್ನು ಪರಿಹರಿಸಬೇಕಾಗಿದೆ.” ಎಂದು ಹೇಳಿ ಪತ್ನಿ ಪಾರಸವಿಯನ್ನು ಕರೆದು ಅತ್ತಿಗೆ ಕುಂತಿದೇವಿಯ ನಿರಂತರ ಸೇವೆಗೆ ಸಿದ್ದಳಾಗಿರುವಂತೆ ಹೇಳಿ ಹೊರಟನು.

ವಿದುರ ಪ್ರಾತಃಕಾಲದಲ್ಲೇ ಹೊರಟು ಹೋದ ಕಾರಣ ಯಾರ ಗಮನಕ್ಕೂ ಬರಲಿಲ್ಲ. ಆದರೆ ಒಂದೆರಡು ದಿನಗಳು ಕಳೆದ ಬಳಿಕ ವಿದುರ ಕಾಣದೆ ಗುಸು ಗುಸು ಸುದ್ದಿಯಾಗಿ ಎಲ್ಲೆಡೆ ಅದು ಚರ್ಚೆಯಾಗತೊಡಗಿತು.

ಇತ್ತ ಭೀಷ್ಮ – ದ್ರೋಣಾಚಾರ್ಯರೂ ವಿದುರ ಹೇಳದೆ ಹೋದ ವಿಚಾರ ಕೇಳಿ ತಿಳಿದು ಆತಂಕಕ್ಕೊಳಗಾದರು. ಧರ್ಮಾತ್ಮನಾದ ವಿದುರ ಈ ರೀತಿ ಹೊರಟು ಹೋಗಿರುವನೆಂದರೆ ಆತನಿಗೆ ವಿಪರೀತ ಮಾನಸಿಕ ವೇದನೆ ಆಗಿರಬೇಕೆಂದು ಅರ್ಥೈಸಿದರು. ವಿದುರನ ಪತ್ತೆಗಾಗಿ ಗೂಢಾಚಾರರನ್ನು ಕಳುಹಿಸಿದರು.

ಧೃತರಾಷ್ಟ್ರನಿಗೆ ಸದಾ ಜೊತೆಗಿರುತ್ತಿದ್ದ ತಮ್ಮನೂ – ಮಂತ್ರಿಯೂ ಆಗಿದ್ದ ಧರ್ಮದ ಪ್ರತಿರೂಪದಂತಿದ್ದ ವಿದುರನ ಅನುಪಸ್ಥಿತಿ ನೀರವತೆಯನ್ನು, ಒಂದು ರೀತಿಯ ಭಗ್ನ ಭಾವವನ್ನೂ ಉಂಟುಮಾಡಿ ಮಾನಸಿಕ ಕಿರಿ ಕಿರಿ, ವೇದನೆ ಉಂಟುಮಾಡಿತು. ನಿರಂತರವಾಗಿ ಸಂಜಯನಲ್ಲಿ ವಿದುರನ ಬಗ್ಗೆ ವಿಚಾರಿಸುತ್ತಾ ಇದ್ದು ಒಂದು ದಿನ ಮೂರ್ಛಿತನಾಗಿ ಬಿದ್ದನು. ಸಂಜಯನ ಉಪಚಾರದಿಂದ ಚೈತನ್ಯ ಹೊಂದಿದ ಧೃತರಾಷ್ಟ್ರ -“ಸಂಜಯಾ, ವಿದುರನಿಲ್ಲದೆ ನಾನಿರಲಾರೆ. ಅಯ್ಯೋ! ಆಡಬಾರದ ಮಾತುಗಳನ್ನಾಡಿದ ನಾನು ವಿದುರನ ಮನ ನೋಯಿಸಿದೆ. ಪಾಪ ಆ ಪುಣ್ಯಾತ್ಮ ಎಷ್ಟು ನೊಂದು ಕೊಂಡಿದ್ದಾನೋ? ಎಲ್ಲಿದ್ದಾನೋ? ಧರ್ಮಮೂರ್ತಿಯಾದ ವಿದುರನ ಹಿತವಚನಗಳಿಂದ ನನ್ನ ಮನದ ನೋವು ಮಾಯವಾಗುತ್ತಿದ್ದವು. ಬದುಕುವ ಧೈರ್ಯ – ಸ್ಥೈರ್ಯ ತುಂಬುತ್ತಿದ್ದವನು ಆತ. ಸಂಜಯಾ… ನೀನು ಈಗಲೆ ಹೊರಟು ವಿದುರ ಎಲ್ಲಿದ್ದರೂ ಹುಡುಕಿ ಕರೆದು ಕೊಂಡು ಬರಬೇಕು. ನನ್ನ ದೀನ ಸ್ಥಿತಿಯನ್ನು ಆತನಲ್ಲಿ ವಿವರಿಸಿ ಹೇಳು. ಖಂಡಿತಾ ಆತ ಒಪ್ಪಿ ಬರುತ್ತಾನೆ” ಹೀಗೆ ಅತ್ತು ಗೋಗರೆದು ಅಂಗಲಾಚಿದ ಮಹಾರಾಜನನ್ನು ಸಂತೈಸಿ ವಿದುರನನ್ನು ಹುಡುಕಲು ಸಂಜಯ ಹೊರಟನು.

ದುರ್ಯೋಧನ ಶಕುನಿಯಾದಿ ಬಳಗ ಸಂತೋಷದಿಂದ ಸಂಭ್ರಮಾಚರಣೆ ಮಾಡುತ್ತಾ, ಆ ಮತಿಭ್ರಾಂತ ವಿದುರ ಮರಳಿ ಬಾರದಿರಲಿ ಎಂದು ಬಯಸಿದರು. ಶಕುನಿಯೂ ವಿದುರನಿಗೆ ಮಾನ ಮರ್ಯಾದೆ ಇದ್ದರೆ ಮರಳಿ ಬರಲಾರನೆಂದು ಹೇಳುತ್ತಾ ಸಂತಸ ಪಡುತ್ತಿದ್ದರು.

ಸಂಜಯ ಅಲೆದಾಡುತ್ತಾ ಎಲ್ಲೆಡೆ ವಿಚಾರಿಸುತ್ತಾ ವಿದುರನಿಗಾಗಿ ಹುಡುಕಾಟ ನಿರತನಾಗಿದ್ದಾನೆ. ಪಾಂಡವರು ಇದ್ದಲ್ಲಿಗೆ ಹೋಗಿರಬಹುದೆಂದು ಅವರ ಬಗ್ಗೆಯೂ ಮಾಹಿತಿ ಕಲೆಹಾಕಿ ಪ್ರಯತ್ನ ಮುಂದುವರಿಸುತ್ತಾ ಕಾಡಿನತ್ತ ಹೊರಟಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page