ಭಾಗ- 163
ಭರತೇಶ್ ಶೆಟ್ಟಿ , ಎ ಕ್ಕಾರ್

ಶಕುನಿಯ ಮಾತು ಕೇಳಿದ ಧರ್ಮರಾಯನು “ಮಾವ ನೀನು ನನ್ನನ್ನು ದ್ಯೂತಕ್ಕೆ ಆಹ್ವಾನಿಸುತ್ತಿರುವೆ – ದ್ಯೂತವೆಂಬುದು ಮೋಸಗಾರಿಕೆಯೆಂದೆ ಪರಿಗಣಿಸಲ್ಪಟ್ಟಿದೆ. ದೇವಲನೆಂಬ ಋಷಿಯು ದ್ಯೂತದ ಬಗ್ಗೆ ಇದೇ ಮಾತನ್ನು ಹೇಳಿದ್ದಾರೆ. ಆದುದರಿಂದ ವಿವೇಕಿಗಳಾದವರು ಜೂಜನ್ನಾಡಬಾರದು” ಎಂದನು. ಶಕುನಿಯು “ಯುಧಿಷ್ಠಿರ! ಮೋಸವೇ ಅಲ್ಲದಿರುವುದು ಲೋಕದಲ್ಲಿ ಯಾವುದಿದೆ? ಬಲಿಷ್ಠರು ದುರ್ಬಲರಲ್ಲಿ ಹೋರಾಡಿ ಜಯಿಸುವುದು ಮೋಸ, ಪಂಡಿತರಾದವರು ಕಡಿಮೆ ಪಾರಂಗತರಾದವರನ್ನು ವಾದದಲ್ಲಿ ಜಯಿಸುವುದು ಮೋಸ, ಬುದ್ಧಿಯಿದ್ದವನು ಕಡಿಮೆ ಬುದ್ಧಿಯಿದ್ದವನನ್ನು ಗೆಲ್ಲುವುದು ಮೋಸ. ರಾಜ -ರಾಜರ ವ್ಯವಹಾರವನ್ನು ರಾಜತಂತ್ರವೆಂದೇ ಹೇಳಿದ್ದಾರೆ. ತಂತ್ರ ಎಂದರೆ ಯುಕ್ತಿ, ಕುಹಕ ಅಂದರೆ ಒಟ್ಟಿನಲ್ಲಿ ಮೋಸ. ಆದರೆ ಅದೆಲ್ಲವೂ ನಡೆಯುತ್ತಲೇ ಇದೆ. ಚೆನ್ನಾಗಿ ಅರಿತು ಪಗಡೆಯ ಕಾಯಿಗಳನ್ನು ನಡೆಸಬಲ್ಲವನು ಮಾತ್ರ ರಾಜಕಾರ್ಯವನ್ನು ಸುಸೂತ್ರವಾಗಿ ನಡೆಸಬಲ್ಲನು. ನೀನದರಲ್ಲಿ ಚೆನ್ನಾಗಿ ಪರಿಣತನೇ ಹೌದು, ನಾನೂ ಒಂದಷ್ಟು ಬಲ್ಲವನು ಹೌದು. ಹೀಗಿರುವಾಗ ಮೋಸ ಹೇಗಾದೀತು? ಧರ್ಮಜ್ಞಾನಿಯಾದ ನೀನಗೆ ಗೊತ್ತಿದೆ ಆದರೂ ಒಂದು ವಿಚಾರ – ಕ್ಷತ್ರಿಯನಾದವನು ಯುದ್ದಕ್ಕಾಗಲೀ, ದ್ಯೂತಕ್ಕಾಗಲೀ ಕರೆಯಲ್ಪಟ್ಟಾಗ ಹಿಂಜರಿಯಬಾರದೆಂಬುದು ಶತ ಶತಮಾನಗಳಿಂದಲೂ ಪಾಲಿಸಿಕೊಂಡು ಬಂದ ಪದ್ದತಿ. ಹಾಗಿದ್ದರೆ ಹೀಗೆ ಕ್ರಮ ಅನುಸರಿಸುತ್ತಾ ಬಂದವರು ಅವಿವೇಕಿಗಳು ಅಲ್ಲವಲ್ಲ? ಮತ್ತೇಕೆ ನೀನು ದ್ಯೂತಕ್ಕೆ ಅಂಜಿ ಹಿಂಜರಿಯುತ್ತಿರುವೆ? ಉತ್ತಮ ಅರಸನಾದ ನಿನಗಿದು ಭೂಷಣವೇ?” ಎಂದು ಅಪಹಾಸ್ಯದ ನಗೆ ಬೀರಿದನು.
“ಮಾವಾ! ಪದ್ದತಿ ಗೊತ್ತಿದ್ದ ಕಾರಣದಿಂದ, ದ್ಯೂತಕ್ಕೆ ಕರೆದರೆ ಬರಲಾರೆ ಎನ್ನಲಾಗದು ನಿಜ. ಅದಕ್ಕಾಗಿ ಮೊದಲೆ ಕರೆಯಬೇಡಿ ಎಂದು ಸೂಚಿಸಿದೆ” ಎಂದನು. ಆಗ ಶಕುನಿ ವ್ಯಂಗ್ಯದ ಭಾವ ಪ್ರಕಟಿಸಿ, ಕುತಂತ್ರಪೂರಿತ ನುಡಿಯಾಗಿ ” ಹ ಹ್ಹ ಹ್ಹಾ! ಇಷ್ಟೊಂದು ಹೇಡಿಯೇ ಚಕ್ರವರ್ತಿ!!! ಕರೆದಾದ ಮೇಲೆ ಕರೆಯಬೇಡಿ ಎಂದರೆ ಅರ್ಥವಿದೆಯೇ? ನಿನಗೆ ಧೈರ್ಯವಿದ್ದರೆ, ಇಷ್ಟವಿದ್ದರೆ ಆಡಬಹುದು. ಇಲ್ಲದಿದ್ದರೆ ಒಲ್ಲೆ ಎಂದು ಹೇಳಿಬಿಡು. ಕುಂಟು ನೆಪವಾಗಿ ರಾಜಾಧಿ ಮಹಾರಾಜರ ಪ್ರತಿಷ್ಠೆಯ ಕ್ರೀಡೆಯಾದ ದ್ಯೂತವನ್ನು ಮೋಸದಾಟ ಎಂದು ಹೇಳುತ್ತಾ ಜಾರುವ ತಂತ್ರವೇಕೆ? ಬದಲಾಗಿ ನೇರವಾಗಿ ಹೇಳಿಬಿಡು ನಾನು ಆಡಲಾರೆ, ನನ್ನಿಂದ ಆಗದು.” ಎಂದು ಮೂದಲಿಸುತ್ತಾ ತನ್ನವರನ್ನೆಲ್ಲಾ ಕುಳಿತಲ್ಲಿಂದಲೇ ತಿರುಗಿ ಒಂದು ಸುತ್ತು ನೋಡಿದ. ಎಲ್ಲರೂ ಧರ್ಮರಾಯ ಅಸಮರ್ಥ ಎಂಬರ್ಥ ಬರುವಂತೆ ಮುಖಭಾವ ವ್ಯಕ್ತಪಡಿಸುತ್ತಾ ನಕ್ಕಾಗ ಅದನ್ನು ಕಂಡು ಸಹಿಸಲಾಗದೆ “ದೇವರ ಇಚ್ಚೆಯಂತೆಯೇ ಆಗಲಿ, ನಿಯತಿಯನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಮಾಡಬಾರದ್ದನ್ನು ಮಾಡಲು ಮುಂದಾದರೆ ಆಗಬಾರದ್ದು ಆಗುತ್ತದೆ. ಆಗಲಿ ನಿಮ್ಮ ಹಠದಂತೆಯೇ ದ್ಯೂತ ಆರಂಭವಾಗಲಿ” ಎಂದು ಧರ್ಮರಾಯ ಸಮ್ಮತಿಸಿದ. ಅಣ್ಣನ ಮಾತು ಕೇಳಿ ದಿಗ್ಭ್ರಾಂತರಾದ ಉಳಿದ ಪಾಂಡವರು, ಹೀಗೇಕೆ ಮಾಡಿದ? ಎಂದು ಅಗ್ರಜ ಧರ್ಮರಾಯನ ಬಗ್ಗೆ ಅಸಮಾಧಾನ ಹೊಂದಿದರು.
ಮುಂದುವರಿಯುವುದು…





















