32.6 C
Udupi
Friday, April 24, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -110

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೧೧ ಮಹಾಭಾರತ

ಕೃಷ್ಣ ಬಲರಾಮರನ್ನು ಕಣ್ತುಂಬ ಕಂಡು ಆನಂದಬಾಷ್ಪ ಸುರಿಸಿದಳು ಕುಂತಿದೇವಿ. “ಅಯ್ಯಾ ಕೃಷ್ಣ ನಿನ್ನ ಹುಟ್ಟಿನಿಂದ ತೊಡಗಿ ಬಾಲ್ಯ ಕಳೆದು ಯೌವ್ವನದವರೆಗೆ ಅತಿಮಾನುಷ ಶಕ್ತಿ ತೋರಿಸುತ್ತಾ ಬೆಳೆದ ಕಥೆಗಳನ್ನು ಸುದ್ದಿಗಳನ್ನು ಕೇಳಿ ತಿಳಿದವರಿದ್ದೇವೆ. ಆ ನಿನ್ನ ಅದ್ವಿತೀಯ ಶಕ್ತಿಯಿಂದ ಭಕ್ತಿ ತಳೆದು ನೀನು ದೇವರೇ ಎಂಬುವುದಾಗಿ ಆರಾಧಿಸಲೂ ತೊಡಗಿದ್ದಾರೆ. ಪರಮಾಪ್ತತೆಯಿಂದ ಪರಮಾತ್ಮನ ಸ್ಥಾನ ನಿನಗೆ ನೀಡಿ ಹೃತ್ಕಮಲಗಳಲ್ಲಿ ನಿನ್ನನ್ನು ಪೂಜಿಸುತ್ತಿದ್ದಾರಂತೆ ಭಕ್ತ ಜನ. ಹೀಗೆ ನಿನ್ನ ಲೀಲಾ ವಿನೋದಗಳು ಒಂದೇ ಎರಡೇ ಕೇಳಿದಷ್ಟೂ ಮುಗಿಯದ ಸುದೀರ್ಘ ಕಥನಗಳಿವೆ. ಇಂತಹ ಮಹಿಮಾ ವಿಶೇಷನಾದ ನಿನ್ನ ದರುಶನ ಪಡೆಯುವ ತುಡಿತ ನನ್ನ ಮನದಲ್ಲಿ ಮಿಡಿಯುತ್ತಲೇ ಇತ್ತು. ಆ ಸುದಿನ ಇಂದು ಬಂದೊದಗಿರುವುದು ಸೌಭಾಗ್ಯವೇ ಸರಿ” ಎಂದು ಸಂಬಂಧದಲ್ಲಿ ಅತ್ತೆಯಾಗಿ ಹಿರಿಯಳಾದರೂ ಕೃಷ್ಣನಿಗೆ ವಂದಿಸಿದಳು ಕುಂತಿ.

ಮಾತು ಮುಂದುವರೆಸುತ್ತಾ ತನ್ನ ಜೀವನ ವೃತ್ತಾಂತ ವಿವರಿಸತೊಡಗಿದಳು. “ಕೃಷ್ಣಾ ನಿನ್ನ ಮಾವ ಪಾಂಡು ಚಕ್ರವರ್ತಿಯವರ ಮರಣಾ ನಂತರ ಕಾಡಾಡಿಗಳಾಗಿದ್ದ ನಾವು ಋಷಿಗಳ ತೀರ್ಮಾನದಂತೆ ಹಸ್ತಿನಾವತಿಯ ಅರಮನೆ ಸೇರಿದೆವು. ಅಲ್ಲಿ ಸೇರಿದ ಬಳಿಕ ಮುಗ್ಧರಾಗಿ ಬಾಂಧವ್ಯದಿಂದ ಕಲಿಯುತ್ತಾ ಆಡುತ್ತಾ ಬೆಳೆಯಬೇಕಾಗಿದ್ದ ಹಸ್ತಿನಾವತಿಯ ವಂಶೋದ್ಧಾರಕ ಮಕ್ಕಳು ಕೌರವ ಪಾಂಡವರೆಂದು ವಿಭಾಗಿಸಲ್ಪಟ್ಟರು. ಕೌರವರ ಪೀಡನೆ, ಕುತಂತ್ರಗಳು ನಿರಂತರವಾದವು. ಕೆಲವೊಮ್ಮೆ ಶೀಘ್ರ ಕೋಪಿಯಾದ ಭೀಮ ಅವರ ಕಾಟ ತಾಳಲಾರದೆ ಮನಬಂದಂತೆ ದಂಡಿಸಿ ಹಿರಿಯರ ಮುಂದೆ ದೂರಾಗಿ ಬಂದದ್ದೂ ಆಯಿತು. ಪಾಂಡವರ ಕೊಲೆ ಸಂಚುಗಳೂ ನಡೆಯಿತು. ಈ ಮಧ್ಯೆ ಗುರು ದ್ರೋಣರ ಗುರುತ್ವದಲ್ಲಿ ವಿದ್ಯಾಭ್ಯಾಸ – ಶಸ್ತ್ರಾಭ್ಯಾಸ ಪೂರೈಸಿ ಬಳಿಕ ಧರ್ಮರಾಯ ಯುವರಾಜನಾದ. ಇನ್ನೂ ಬಿಗಡಾಯಿಸಿದ ಸ್ಥಿತಿ ವಾರಣಾವತದ ಅರಮನೆಯಲ್ಲಾದ ಅಗ್ನಿ ದುರಂತದವರೆಗೆ ಬೆಳೆದು ನಾವು ಸತ್ತು ಹೋಗಿದ್ದೇವೆ ಎಂದೇ ಆಗಿ ಹೋಯಿತು. ಇನ್ನು ರಾಜ್ಯ ಅಧಿಕಾರ ಏನೂ ಬೇಡ. ಹೇಗಾದರು ಬದುಕುವ ಎಂಬ ತೀರ್ಮಾನದಂತೆ ಅಲೆಮಾರಿ ಬದುಕು ನಮ್ಮದಾಗಿಸಿ ಈ ರೀತಿ ಮಾರುವೇಷದಿಂದ ಬದುಕುತ್ತಿದ್ದೆವು. ಆದರೆ ಧೌಮ್ಯ ಋಷಿಗಳ ನಿರ್ದೇಶನದ ಮೂಲಕ ಈ ಪಣ, ಇಂದಿನ ಪ್ರಕರಣದವರೆಗೆ ನಮ್ಮ ಬದುಕು ಬೆಳೆದು ನಿನ್ನ ದರ್ಶನ ಭಾಗ್ಯ ಒದಗಿ ಬಂತು ದೇವಾ!” ಎಂದು ಬದುಕಿನ ಕಥನ ಬಿಚ್ಚಿಟ್ಟಳು ಮಾತೆ ಕುಂತಿದೇವಿ.

ಮತ್ತೆ ಕೃಷ್ಣನಿಗೆ ನಮಿಸಿ, “ದೇವಾ! ಆ ಕೌರವರೇಕೋ ದಾಯಾದಿ ಮತ್ಸರದಿಂದ ಇನ್ನು ಮುಂದೆಯೂ ಏನಾದರು ಸಂಚು ಮಾಡಿ ನನ್ನ ಮಕ್ಕಳನ್ನು ಪೀಡಿಸದೆ ಉಳಿಯಲಾರರು. ಜಗದ ಜನರ ದೇವನಂತೆ ಆರ್ತರನ್ನು ರಕ್ಷಿಸುತ್ತಾ ಬೆಳೆದ ನಿನ್ನನ್ನು ಕಾಣುವಾಗ ನಾನೂ ಭಕ್ತಳಾಗಿ ನಿನ್ನಲ್ಲಿ ಬೇಡುತ್ತಿದ್ದೇನೆ ಪರಮಾತ್ಮ.. ನನ್ನ ಮಕ್ಕಳನ್ನು ನಿನ್ನ ಮಡಿಲಿಗೆ ಅರ್ಪಿಸುತ್ತಿದ್ದೇನೆ. ಅವರನ್ನು ನೀನೇ ಕಾಪಾಡಬೇಕು. ಎಂದೂ ಕೈ ಬಿಡದೆ ಸಲಹಿ ರಕ್ಷಿಸಬೇಕು” ಎಂದು ದೀನಳಾಗಿ ಬೇಡಿಕೊಂಡು ಶಿರಬಾಗಿ ವಂದಿಸಿದಳು. ಮಾತೆಯನ್ನು ಅನುಸರಿಸಿ ಐವರು ಪಾಂಡವರೂ, ದ್ರೌಪದಿಯೂ ದೇವತಾ ಭಾವದಿಂದಲೇ ಕೃಷ್ಣ ಬಲರಾಮರಿಗೆ ನಮಿಸಿದರು.

ದುಃಖತಪ್ತ ಅತ್ತೆ ಕುಂತಿದೇವಿಯನ್ನು, ಆಕೆಯ ಭಯಗೊಂಡ ಸ್ಥಿತಿಯನ್ನು ಕಂಡು ಕೃಷ್ಣ ಪರಮಾತ್ಮ ಆಕೆಯನ್ನು ಆಧರಿಸಿ ಹಿಡಿದೆತ್ತಿ, ತನ್ನ ಪೀತಾಂಬರದ ತುದಿಯಿಂದ ಅಶ್ರುಧಾರೆಯನ್ನೊರಸಿ ಸಂತೈಸಿದ. ಅಭಯಪ್ರದನಾಗಿ : ಮಮ ಪ್ರಾಣಾಹಿ ಪಾಂಡವಾಃ ಎಂದು ಹೇಳಿದ. ಅತ್ತೇ, ಧೈರ್ಯಸ್ಥಳಾಗು ನಿನ್ನ ಐವರು ಮಕ್ಕಳ ಯೋಗಕ್ಷೇಮ ರಕ್ಷೆ ನನಗಿರಲಿ. ಈ ನಿನ್ನ ಐವರು ಪುತ್ರರನ್ನು ನನ್ನ ಪಂಚಪ್ರಾಣಗಳಂತೆ ರಕ್ಷಿಸಿಕೊಳ್ಳುತ್ತೇನೆ ಎಂದು ಧೈರ್ಯ ತುಂಬಿದನು.

ಕುಂತಿದೇವಿ ನಿರುಮ್ಮಳ ಭಾವ ಹೊಂದಿದಳು ಅತಿಭಾರದ ಭಯ ಕೃಷ್ಣನ ಅಭಯವಾಕ್ಯದಿಂದಾಗಿ ನಿವಾರಣೆಯಾಯಿತು. ಸಂತೋಷಗೊಂಡು ಅಣ್ಣ ವಸುದೇವ, ಅತ್ತಿಗೆ ದೇವಕಿ, ನಂದಗೋಪ ಯಶೋದೆಯರ ಯೋಗಕ್ಷೇಮ ಕೇಳಿ ತಿಳಿದಳು. ಮಥುರೆ, ನಂದಗೋಕುಲದ ವಿಚಾರ ಸವಿವರವಾಗಿ ಕೇಳುತ್ತಾ, “ಕೃಷ್ಣಾ, ನೀವು ದ್ವಾರಕಾ ನಗರ ನಿರ್ಮಿಸಿ ವೈಭವದ ಸಾಮ್ರಾಜ್ಯ ಕಟ್ಟಿರುವಿರಂತೆ? ನಿಮಗೆ ಮದುವೆಗಳಾಗಿವೆಯಂತೆ?” ಹೀಗೆಲ್ಲಾ ಅತಿ ಉತ್ಸಾಹದಿಂದ ಪ್ರಶ್ನೆಗಳ ಸುರಿಮಳೆಗೈಯುತ್ತಾ ಸಂಭಾಷಣೆ ಸಾಗುತ್ತಿತ್ತು. ಪಾಂಡವರೂ ಬಲರಾಮಕೃಷ್ಣರೂ ಬಹುಹೊತ್ತು ಕುಶಲೋಪರಿ ವಿಚಾರಿಸುತ್ತಾ ಕಾಲ ಕಳೆದರು. ಬಲರಾಮ ರೇವತಿ – ಭೀಮಸೇನ ಹಿಡಿಂಬೆಯ ವಿವಾಹ ಕಥೆಗಳು, ಕೃಷ್ಣ ಕಲ್ಯಾಣಗಳ ಕಥೆ, ಹೀಗೆ ಅಮಿತ ಕಥನಗಳು ಹಾದು ಹೋದವು. ಕುಂತಿ ಆಶ್ರಯದಾತ ಕುಂಬಾರನ ಸಹಕಾರದಿಂದ ಎಲ್ಲರಿಗೂ ಪ್ರೀತಿ ತುಂಬಿದ ಸಂತೋಷದ ಸರಳ ಸಿಹಿ ಊಟದ ವ್ಯವಸ್ಥೆ ಮಾಡಿ ಉಣ ಬಡಿಸಿದಳು. ಎಲ್ಲರೂ ಊಟ ಮಾಡುತ್ತಿದ್ದರೆ ಅತ್ತೆ ಸೊಸೆ ಪ್ರೀತಿಯಿಂದ ಬಡಿಸುತ್ತಿದ್ದರು. ದ್ರೌಪದಿ ನೀಡಿದ ನೀರು ಕುಡಿದು ಸಂತೃಪ್ತರಾಗಿ ಮೇಲೆದ್ದರು.

ಬಳಿಕ ಕೆಲಹೊತ್ತು ಮಾತನ್ನಾಡುತ್ತಾ ಇದ್ದು ಕೃಷ್ಣ ಬಲರಾಮರು ಕುಂತಿ, ಪಾಂಡವರು, ದ್ರೌಪದಿಗೆ ಶುಭ ಹಾರೈಸಿ ಹೊರಟು ಹೋದರು. ಮಹರ್ಷಿ ಧೌಮ್ಯರೂ ಯಥೋಚಿತ ಉಪಚಾರ ಸ್ವೀಕರಿಸಿ, ಎಲ್ಲರನ್ನೂ ಆಶೀರ್ವದಿಸಿ, ಕೃಷ್ಣ ಬಲರಾಮರು ದ್ವಾರಕೆಗೆ ಹೊರಟರೆ, ಧೌಮ್ಯರು ತನ್ನ ಆಶ್ರಮದತ್ತ ಹೋದರು.

ಮರುದಿನ ಪಾಂಡವರು ಭಿಕ್ಷಾಟನೆಗೆ ಹೊರಟಾಗ ಏಕಾಂತದಲ್ಲಿ ಅತ್ತೆ ಕುಂತಿ ಸೊಸೆ ರಾಜಕುಮಾರಿ ದ್ರೌಪದಿಗೆ ಭವಿತವ್ಯದ ಜೀವನಕ್ಕೆ ಪ್ರಾಮುಖ್ಯವಾದ ಹಿತೋಪದೇಶ ನೀಡುವಲ್ಲಿ ಉತ್ಸುಕಳಾಗಿದ್ದಾಳೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page