
ಮುಂಬೈ : ಕಳೆದ ಒಂದುವರೆ ದಶಕಗಳಿಂದ ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯು ವಾರ್ಷಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ನಡೆಸಿಕೊಂಡು ಬಂದಿದ್ದು ಈ ಬಾರಿಯೂ ಕೂಡ ಆಗಸ್ಟ್ 18ರ ಆದಿತ್ಯವಾರದಂದು ವರಮಹಾಲಕ್ಷ್ಮಿ ಪೂಜೆಯ ಜೊತೆಗೆ ಸಾಂಸ್ಕೃತಿಕ ವೈಭವ, ಯಕ್ಷಗಾನ, ಸನ್ಮಾನ ಕಾರ್ಯಕ್ರಮ ನಡೆಯಿತು.
ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಜಗನ್ನಾಥ್ ಎಂ ಶೆಟ್ಟಿ ಪಣಿಯೂರು ಅವರು ಈ ಕುರಿತು ಮಾತನಾಡಿ ನಮ್ಮ ಸಮಿತಿಯು ಕಳೆದ 15 ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತ್ರ ನಿರತವಾಗದೆ ಸಾಮಾಜಿಕ ಶೈಕ್ಷಣಿಕ ಹಾಗೂ ಇತರ ಜನಪರ ಕಾರ್ಯಕ್ರಮಗಳ ಮೂಲಕ ತುಳು-ಕನ್ನಡಿಗರನ್ನು ಹಾಗೂ ಭಕ್ತಾಭಿಮಾನಿಗಳನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.ಮಹಿಳಾ ವಿಭಾಗದ ಸದಸ್ಯರಿಂದ ಕುಣಿತ ಭಜನೆ ಹಾಗೂ ಮಕ್ಕಳಿಂದ ನೃತ್ಯ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಪ್ರೀತಿ ಭೋಜನ ನಡೆಯಿತು. ಬಳಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯರಿಂದ ಯಕ್ಷ ಗುರು ನಾಗೇಶ ಪೊಳಲಿ ನಿರ್ದೇಶನದಲ್ಲಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನಡೆಯಿತು.ಈ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವೇದಮೂರ್ತಿ ಸತೀಶ್ ಎಂ ಭಟ್ ಮಲಾಡ್, ಉತ್ಕರ್ಷ ವಿದ್ಯಾಮಂದಿರದ ಟ್ರಸ್ಟಿ, ಸಿ ಎ ಶ್ರೀಕಾಂತ್ ಮರಾಠೆ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬೈಯ ಅಧ್ಯಕ್ಷ ರವೀಶ್ ಆಚಾರ್ಯ, ಬಂಟರ ಸಂಘ ಮುಂಬೈಯ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ, ಬಂಟರ ಸಂಘ ಮೀರಾಬಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಡಾ. ಸುರೇಖಾ ರತನ್ ಕುಲಾಲ್, ಕಾಂದಿವಲಿ ಪೂರ್ವದ ಹೋಟೆಲ್ ಉದ್ಯಮಿ ಚಂದ್ರಶೇಖರ್ ಶೆಟ್ಟಿ ಕೊಕ್ಕರ್ಣ, ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನ ಡಿ ಕುಲಾಲ್, ಯುವ ವಿಭಾಗದ ಕಾರ್ಯಾಧ್ಯಕ್ಷೆ ಸೌಮ್ಯ ಜೆ ಮೆಂಡನ್ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
































































































































