
ಉಡುಪಿ: ಮಹಾರಾಷ್ಟ್ರದ ವಿಜಯ ಎಚ್. ರಾವ್ ಅವರು ಮತ್ಸ್ಯಗಂಧ ರೈಲಿನಲ್ಲಿ ಮುಂಬೈಯಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಲಕ್ಷಾಂತರ ಮೌಲ್ಯದ ವಜ್ರಾಭರಣಗಳು ಕಳುವಾದ ಘಟನೆ ನಡೆದಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮ್ಮ ಸೂಟ್ಕೇಸ್ ಮತ್ತು ಹ್ಯಾಂಡ್ ಬ್ಯಾಗ್ ಗಳನ್ನು ಸೀಟ್ ನ ಕೆಳಗಡೆ ಇಟ್ಟಿದ್ದು ಒಡವೆಗಳು ಇದ್ದ ವ್ಯಾನಿಟಿ ಬ್ಯಾಗ್ ಅನ್ನು ಅವರ ತಲೆಯ ಮೇಲೆ ಇರಿಸಿ ರಾತ್ರಿ ವೇಳೆ ಮಲಗಿದ್ದರು. ಮರುದಿನ ಬೆಳಗ್ಗೆ ರೈಲು ಇಂದ್ರಾಳಿ ರೈಲು ನಿಲ್ದಾಣಕ್ಕೆ ಆಗಮಿಸಿದ ವೇಳೆ ಅವರಿಗೆ ಎಚ್ಚರವಾಗಿದ್ದು ತಲೆಯ ಬಳಿ ಇಟ್ಟಿದ್ದ 138 ಗ್ರಾಂ ತೂಕದ ಬಂಗಾರ ಹಾಗೂ ವಜ್ರದ ಆಭರಣಗಳು ಮತ್ತು 8,000 ರೂ. ನಗದು ಇರುವ ವ್ಯಾನಿಟಿ ಬ್ಯಾಗ್ ಅನ್ನು ಯಾರೋ ಎಗರಿಸಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















