
ನವದೆಹಲಿ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದೆ ಎಂಬ ಕಾರಣಕ್ಕೆ ಯಾರೂ ಸ್ವಯಂಚಾಲಿತವಾಗಿ ಪೌರತ್ವ ಕಳೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಮತದಾರರ ಪಟ್ಟಿಯಲ್ಲಿನ ಹೆಸರು ಆಧರಿಸಿ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಪುನರುಚ್ಚರಿಸಿತು.
ಅರ್ಜಿದಾರರ ಪರ ವಕೀಲ ಗೋಪಾಲ್ ಶಂಕರನಾರಾಯಣನ್, ಪಶ್ಚಿಮ ಬಂಗಾಳದ ಮೇಲ್ಮನವಿ ನ್ಯಾಯಮಂಡಳಿಗಳಲ್ಲಿ ಲಕ್ಷಾಂತರ ಅರ್ಜಿಗಳು ಬಾಕಿ ಇದ್ದು, ಸಾವಿರಾರು ಪ್ರಕರಣಗಳಲ್ಲಿ ಹೆಸರುಗಳನ್ನು ಮರುಸೇರ್ಪಡೆ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಮೇಲ್ಮನವಿಗಳು ಬಾಕಿ ಇರುವಾಗಲೇ ಹೆಸರು ಕೈಬಿಟ್ಟವರಿಗೆ ಸರ್ಕಾರಿ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮತದಾರರ ಪಟ್ಟಿಗೆ ಹೆಸರು ಸೇರಿಸುವುದು ಅಥವಾ ತೆಗೆದುಹಾಕುವುದು ಚುನಾವಣಾ ಆಯೋಗದ ವ್ಯಾಪ್ತಿಯ ವಿಷಯವಾಗಿದ್ದು, ಅದರ ಆಧಾರದಲ್ಲಿ ಸರ್ಕಾರ ಪೌರತ್ವ ಅಥವಾ ಸೌಲಭ್ಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
















































