
ಮಣಿಪಾಲ: ಶಾಲಾ ಬಸ್‌ವೊಂದು ರಸ್ತೆ ಬದಿಯ ತೋಡಿಗೆ ಉರುಳಿದ ಪರಿಣಾಮ ಏಳು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸರಳೆಬೆಟ್ಟು ಕೊಡಂಗೆ ದೇವಸ್ಥಾನದ ಸಮೀಪ ಶುಕ್ರವಾರ ಬೆಳಗ್ಗೆ ನಡೆದಿದೆ.
ಮಣಿಪಾಲ ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ತಿರುವಿನಲ್ಲಿ ರಿವರ್ಸ್ ತೆಗೆದುಕೊಳ್ಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಉರುಳಿದೆ. ಬಸ್ಸಿನಲ್ಲಿ ಸುಮಾರು 20 ವಿದ್ಯಾರ್ಥಿಗಳಿದ್ದು, ಗಾಯಗೊಂಡ ಏಳು ಮಂದಿಯಲ್ಲಿ ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿದಿನ ಬಸ್ ಏರಲು ರಸ್ತೆಯ ಬಲಭಾಗದಲ್ಲಿ ನಿಲ್ಲುತ್ತಿದ್ದ ಮಕ್ಕಳು, ಇಂದು ಎಡಭಾಗದಲ್ಲಿ ನಿಂತಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇಲ್ಲದಿದ್ದರೆ ಬಸ್ ಮಕ್ಕಳ ಮೇಲೆಯೇ ಉರುಳುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.











































