
ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ಮಟನ್ ಬೆಲೆ ಕೆಜಿಗೆ 100 ರು. ಇದ್ದದ್ದು 500 ರು. ಆದರೂ ಖರೀದಿ ಮಾಡುತ್ತೀರಿ. 10-15 ವರ್ಷದ ಬಳಿಕ ಅನಿವಾರ್ಯವಾಗಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ್ದರೆ ಅದನ್ನು ಯಾಕೆ ದೊಡ್ಡದು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಡೀಸೆಲ್ ಬೆಲೆ ಎಷ್ಟೇ ಹೆಚ್ಚಾದರೂ ನಿಮ್ಮ ವಾಹನಗಳಿಗೆ ಹಾಕಿಸುತ್ತೀರಿ. ಅಕ್ಕಿ, ಬಟ್ಟೆ, ಎಣ್ಣೆ, ಬೇಳೆ, ತರಕಾರಿ ಎಷ್ಟೇ ಹೆಚ್ಚಾ ದರೂ ಖರೀದಿಸುತ್ತೀರಿ. 10-15 ವರ್ಷದ ಬಳಿಕ ಶೇ.15 ರಷ್ಟು ದರ ಪರಿಷ್ಕರಣೆ ಮಾಡಲಾಗಿದ್ದು ಸರ್ಕಾರ ಸಾರಿಗೆ ನಿಗಮಗಳಿಗೆ ಎಷ್ಟು ಬೆಂಬಲ ನೀಡಲು ಸಾಧ್ಯ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 4,000ಕ್ಕೂ ಹೆಚ್ಚು ಹೊಸ ಬಸ್ಸು ಖರೀದಿಸಲಾಗಿದ್ದು 7ನೇ ವೇತನ ಆಯೋಗ ಜಾರಿ ಮಾಡಲಾಗಿದೆ. ಇನ್ನು ನಮ್ಮಲ್ಲಿ 84 ರು. ಪ್ರಯಾಣ ದರ ಇದ್ದರೆ ನೆರೆಯ ಆಂಧ್ರಪ್ರದೇಶದಲ್ಲಿ 140 ರು. ಇದೆ. ನೆರೆ ರಾಜ್ಯಗಳಲ್ಲೂ ನಮ್ಮ ರಾಜ್ಯಕ್ಕಿಂತ ತುಂಬಾ ಹೆಚ್ಚಿನ ಪ್ರಯಾಣ ದರ ಇದೆ. ಇದೆಲ್ಲವನ್ನೂ ನೋಡಿಕೊಂಡು ಅಲ್ಪ ಪ್ರಮಾಣದಲ್ಲಿ ದರ ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.



