
ಮಂಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವು ಜೂನ್ 28ರಿಂದ ಜುಲೈ 1ರವರೆಗೆ ನಡೆಯಲಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಹನಿ ನೀಡುವಂತೆ ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಹಾಗೂ ವಿವಿಧ ಇಲಾಖೆಗಳು ಸಕ್ರಿಯವಾಗಿ ಭಾಗವಹಿಸಿ ಮನೆಮನೆಗೆ ತೆರಳಿ ನವಜಾತ ಶಿಶುಗಳನ್ನು ಗುರುತಿಸಿ ಲಸಿಕೆ ನೀಡಬೇಕು ಎಂದರು.
ತಾಯಂದಿರ ಸಭೆಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಸಿಕಾ ದಿನ ಮತ್ತು ಕೇಂದ್ರಗಳ ಕುರಿತು ಜಾಗೃತಿ ಮೂಡಿಸಬೇಕು. ಶಾಲೆಗಳು ಕೂಡ ಪೋಲಿಯೋ ದಿನಕ್ಕೂ ಮುನ್ನ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಹೆಚ್ಚಿಸಬೇಕು ಎಂದು ತಿಳಿಸಿದರು.
ವಲಸೆ ಕಾರ್ಮಿಕರು, ಕಟ್ಟಡ ನಿರ್ಮಾಣ ಮತ್ತು ಗಣಿಗಾರಿಕೆ ಕಾರ್ಮಿಕರ ಮಕ್ಕಳಿಗೆ ಆದ್ಯತೆ ನೀಡಿ ಲಸಿಕೆ ನೀಡುವಂತೆ ಸೂಚನೆ ನೀಡಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ 1,40,247 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.




























