
ಮಂಗಳೂರು: ಕೇರಳದಲ್ಲಿ ನಿಫಾ ವೈರಸ್ ಗೆ ಎರಡು ಸಾವು ಉಂಟಾದ ಬೆನ್ನಲ್ಲೇ ಇದೀಗ ಮಂಗನ ಕಾಯಿಲೆ ಭೀತಿ ಉಂಟಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯು ಕೇರಳಕ್ಕೆ ಹೊಂದಿಕೊಂಡಿರುವ ಕಾರಣ ಆರೋಗ್ಯ ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ ವಹಿಸಲು ಮುಂದಾಗಿದೆ.
ಈ ಮಂಗನ ಕಾಯಿಲೆ ಆಫ್ರಿಕನ್ ದೇಶಗಳಲ್ಲಿ ಹರಡಿದ್ದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರಿನ ಮೂಲಕ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ನಡೆಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಂಗನ ಕಾಯಿಲೆ ಪೀಡಿತ ರೋಗಿಗಳಿಗೆ ಚಿಕಿತ್ಸೆಗೆಂದು ವೆನ್ಲಾಕ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ತಿಮ್ಮಯ್ಯ ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಯಾವುದೇ ಆತಂಕವಿಲ್ಲ. ವಿಮಾನ ನಿಲ್ದಾಣ, ಬಂದರಿನಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ನಿರಂತರ ತಪಾಸಣೆ ಮಾಡಲಾಗುತ್ತಿದ್ದು ಮುನ್ನೆಚ್ಚರಿಕೆಗೆಂದು ವೆನ್ಲಾಕ್ ನಲ್ಲಿ ಆರು ಬೇಡ್ಗಳನ್ನು ಮೀಸಲಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು ವೈರಲ್ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಕೆಮ್ಮು, ಶೀತ, ಗಂಟಲು ನೋವು ಸಹಿತ ಜ್ವರದ ಲಕ್ಷಣ ಕಂಡುಬರುತ್ತಿದ್ದು ಮಕ್ಕಳಲ್ಲಿ ಈ ವೈರಲ್ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.













