ಕಥೆ (ಭಾಗ- 36)
ಚೇತನ್ ವರ್ಕಾಡಿ

ಸುಂದರರಾಯರಿಗೆ ತಪ್ಪು ಮಾಡಿಬಿಟ್ಟೆನೋ ಅನ್ನೊ ನೋವು ಮನಸನ್ನು ಕಾಡತೊಡಗಿತು.ಮಗಳನ್ನು ಕರೆದರೂ ಮಾತಿಗೆ ಸ್ಪಂದಿಸದೆ ಹೋದಾಗ ಮನದೊಳಗೆ ಅದೇಕೊ ಭಯ ನೋವು ಆವರಿಸತೊಡಗಿತು.ಕೂಡಲೆ ಮಂಗಳ ಒಳಗಡೆಯಿಂದ ಒಂದು ಲೋಟ ನೀರು ತಂದವಳು ಸೌಂದರ್ಯಳ ಮುಖಕ್ಕೆ ಚಿಮುಕಿಸಿದಾಗ ನಿದ್ದೆಯಿಂದ ಎದ್ದವಳಂತೆ ಪಕ್ಕನೆ ಎದ್ದು ಕುಳಿತಳು.ಎಲ್ಲರೂ ಅವಳನ್ನೇ ಸುತ್ತುವರಿದಿದ್ದರು.ಸುಂದರರಾಯರಿಗೆ ಹೋದ ಜೀವ ಬಂದಂತಾಯಿತು.ಹಾಗೆಯೆ ಮಗಳ ಕೆನ್ನೆಯನ್ನು ಸವರಲು ಕೈಮೇಲಕ್ಕೆತ್ತಿದರೆ,ಮತ್ತಷ್ಟು ಕೋಪಗೊಂಡ ಅವಳು ಮಂಗಳಳನ್ನೆ ದುರುಗುಟ್ಟಿ ನೋಡುತ್ತಾ….ನೋಡೆ ನಿನ್ನಿಂದಾಗಿ ಯಾವತ್ತೂ ಕೈ ಎತ್ತದ ನನ್ನ ಡ್ಯಾಡಿಯೆ ಇವತ್ತು ನನಗೆ ಹೊಡೆದು ಬಿಟ್ರು ಇದಕ್ಕೆಲ್ಲ ಕಾರಣ ನೀನೆ ಕಾಣೆ,ಬಿಡಲ್ಲ ನಿನ್ನನ್ನು ನಾನು ಬಿಡಲ್ಲ ಇವತ್ತಿನಿಂದ ಹೊಸ ಆಟ ಆರಂಭ ಕಾಣೆ!ಈ ಆಟದಲ್ಲಿ ನೀನು ಗೆಲ್ತಿಯೋ ನಾನು ಗೆಲ್ತಿನೊ ನೋಡೆ ಬಿಡೋಣ ಎಂದು ಪಟ ಪಟ ಮಾತು ಮುಗಿಸಿ ಕಾರಿನೊಳಗೆ ಹೋಗಿ ಕುಳಿತುಕೊಂಡಳು.ಸುಂದರರಾಯರಿಗೆ ಮಗಳು ಯಾತಕ್ಕೆ ಈ ರೀತಿ ಮಾಡುತ್ತಿದ್ದಾಳೆ ಅನ್ನೋದೆ ಅರಿವಾಗಲಿಲ್ಲ.ಬಡವರಾದರೂ ಗುಣನಡತೆಯಲ್ಲಿ ಸಿರಿವಂತರಾಗಿರುವ ಮಂಗಳಳ ಎದುರು ತನ್ನ ಮಗಳು ಮಾಡಿರುವ ತಪ್ಪಿಗಾಗಿ ಕೈ ಮುಗಿದು ಕ್ಷಮೆ ಯಾಚಿಸಿದಾಗ ಮಂಗಳ ಕೂಡಲೆ ಸುಂದರರಾಯರ ಕೈಯನ್ನು ಕೆಳಗಿಳಿಸುವಂತೆ ಬೇಡಿಕೊಂಡಳು.ಸುಂದರರಾಯರು ಕಾರನ್ನು ಹತ್ತಿ ಮನೆಯ ದಾರಿಗೆ ಮುಖ ಮಾಡಿದರು.
ತನ್ನ ತಂದೆಗೇನೊ ಹುಷಾರಿಲ್ಲ ಅನ್ನೋ ಸುದ್ದಿ ತಿಳಿದು ಊರಿಗೆ ಬಂದ ಮಂಗಳಳ ಬದುಕಿನಲ್ಲಿ ಅದೇನೋ ಹೊಸ ಹೊಸ ಅನುಭವಗಳು ಸೃಷ್ಟಿಯಾಗತೊಡಗಿತು.ಪ್ರತಿದಿನ ಪ್ರತಿಕ್ಷಣ ಎಲ್ಲರ ಹಿತವನ್ನೇ ಬಯಸುವ ಮುಗ್ದ ಹುಡುಗಿಯ ಬಾಳಿಗೆ ಸೌಂದರ್ಯ ಖಳನಾಯಕಿಯಾಗಿ ಪ್ರವೇಶಿಸಿಯೆ ಬಿಟ್ಟಳು.ಬಡಹುಡುಗಿಯ ಬದುಕಿನ ಕಥೆಗೆ ಹೊಸ ತಿರುವು ನೀಡೋ ಕಥೆಗಾರ ಬರತ್ತಾನೊ ಇಲ್ಲವೊ!ಮನೆಗೆ ಬರುತ್ತಿದ್ದಂತೆಯೆ ಒಂದು ಕಡೆ ತನ್ನ ಮುದ್ದಿನ ತಂದೆ ಜ್ವರ ಬಂದು ಮಲಗಿದ್ದರೆ ಇನ್ನೊಂದು ಕಡೆ ಏನು ಅರ್ಥವಾಗದಂತೆ ಸೌಂಧರ್ಯಳ ಆಗಮನ,ಆವೇಶದ ಮಾತುಗಳು,ಸವಾಲುಗಳು ಎಲ್ಲವೂ ಆಕೆಯನ್ನು ತಿನ್ನುವಂತೆ ಒಂದರ ಮೇಲೊಂದರಂತೆ ಯೋಚನಾ ಕಡಲಲ್ಲಿ ತನ್ನನ್ನು ಮುಳುಗಿಸಿಬಿಟ್ಟಿತ್ತು..






























































































































