ಕಥೆ (ಭಾಗ- 23)
ಚೇತನ್ ವರ್ಕಾಡಿ

ತನ್ನೊಳಗೆ ಬಚ್ಚಿಟ್ಟ ಪ್ರೀತಿ ಬಿಚ್ಚಿಡದೆ ಹಾಗೆ ಬಾಡಿತೆ…?ಒಂದು ಮಾತು ಹೇಳಿದರೂ ಸಾಕು ಮಿಥುನ್ ಮಂಗಳಳನ್ನು ಪ್ರೀತಿಯಿಂದ ಬಿಟ್ಟು ಕೊಡುತ್ತಿದ್ದ!ಎಲ್ಲವನ್ನೂ ತನ್ನೊಳಗೆ ನುಂಗಿಗೊಂಡು ಸಾವುಬದುಕಿನ ಮಧ್ಯೆ ಹೋರಾಡುತ್ತಿರುವ ಮಧುವಿನ ಬದುಕು ಚಿಂತಾಜನಕವಾಗಿತ್ತು..
ಮಾತುಗಳು ಮೌನವಾಗಿ ಎಲ್ಲರ ಮನದಲ್ಲೂ ಏನೇನೊ ಆಲೋಚನೆಗಳು ಆವರಿಸಿದಂತಿತ್ತು..!ನಿಧಾನವಾಗಿ ಡೇಂಜರ್ ಲೈಟ್ ಮಾಯವಾಗತೊಡಗಿತು.ಮಧು ಬದುಕಿದ ಎಂಬ ಸಂದೇಶವನ್ನು ಅದು ನೀಡುತ್ತಿದ್ದಂತೆಯೆ ಎಲ್ಲರ ಮುಖದಲ್ಲಿ ಬದಲಾವಣೆಯ ಛಾಯೆ ಮೂಡತೊಡಗಿತು.ಒಳಗಿನಿಂದ ಬಂದ ಡಾಕ್ಟರ್ ಮಿಥುನ್‌ನನ್ನು ಒಳ ಕರೆದಾಗ ತನ್ನ ಆಪ್ತ ಮಿತ್ರನನ್ನು ನೋಡೋಕೆ ಅವಸರವಸರವಾಗಿ ಬಂದ.ಸುತ್ತಲೂ ಹತ್ತಾರು ಡಾಕ್ಟರ್, ಅವರ ಮಧ್ಯೆ ಜೀವಂತಶವವಾಗಿ ಬಿದ್ದ ಮಧುವಿನ ದೇಹ.ಆ ದೃಶ್ಯವನ್ನು ನೋಡಿ ಒಂದು ಕ್ಷಣ ಸಹಿಸಲಾಗದೆ ಕಣ್ಣೀರಿನ ಸುಧೆಯೇ ಹರಿದುಹೋಯಿತು.”ಮಧು ಹುಷಾರಾಗಲ್ವ ಡಾಕ್ಟರ್” ಎಂದು ಅಳುವಿನ ನಡುವೆಯೂ ಗೆಳೆಯನ ಮುಖ ನೋಡುತ್ತಾ ಮಿಥುನ್ ಕೇಳಿದಾಗ!ಡಾಕ್ಟರ್ ಹೇಳಿದ ಉತ್ತರ ಕೇಳಿ ಆತನಿಗೆ ಮಾತೆ ನಿಂತುಹೋಯಿತು. ಹೌದು ಮಧುವಿನ ಉಸಿರು ನಿಂತಿರಲಿಲ್ಲ ಆದರೆ ನಡೆದ ಅಪಘಾತದಲ್ಲಿ ನೆನಪಿನ ಶಕ್ತಿಯನ್ನೆ ಕಳೆದುಕೊಂಡಿದ್ದ. ವೈದ್ಯಲೋಕದಲ್ಲೇ ಚಿಕಿತ್ಸೆಗೆ ಸಿಗದ ರೋಗಕ್ಕೆ ಬಲಿಯಾಗಿದ್ದ.ಎಲ್ಲರಿಗೂ ವಿಷಯ ತಿಳಿಯಿತು.ಹೆತ್ತವರ ನೋವಂತೂ ಕಣ್ಣಲ್ಲಿ ನೋಡುವಂತಿರಲಿಲ್ಲ.ಮಧು ಮಧು ಎಂದು ದಿನಪೂರ್ತಿ ಕರೆಯುತ್ತಿದ್ದ ಸುಗಂಧಿ ಇನ್ನು ಎಷ್ಟು ಕರೆದರೂ ಮಧು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ.ಮಂಗಳ ಎದುರು ಬಂದು ನಿಂತರೂ ಗುರುತಿಸುವ ಶಕ್ತಿ ಅವನಿಗಿಲ್ಲ.ಎಲ್ಲವೂ ದೇವನ ಇಚ್ಛೆ ,ನಡೆಯಬಾರದ ದುರಂತ ನಡೆದೆ ಹೋಯಿತು.ವಾರಕಳೆಯಿತು,ಮಧುವನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದರು.ಏನೂ ಅರಿವಿಲ್ಲದ ಮುಗ್ದ ಮಗುವಂತೆ ಮಧು ಮೂಕನಾಗಿ ಎಲ್ಲವನ್ನೂ ನೋಡುತ್ತಿದ್ದ.ಹೆತ್ತ ಕರುಳ ದು:ಖವಂತೂ ಮುಗಿಲು ಮುಟ್ಟಿತ್ತು.ವಾರ ಕಳೆಯಿತು ತಿಂಗಳೂ ಕಳೆಯಿತು ,ಮಿಥುನ್ ಅವನ ಕೆಲಸದತ್ತ ಮುಂದುವರಿದ,ಸೌಂಧರ್ಯಳಿಗೂ ಇಂಚು ಇಂಚಾಗಿ ಮಧುವಿನಲ್ಲಿದ್ದ ಪ್ರೀತಿ ನಿಧಾನವಾಗಿ ಬಾಡತೊಡಗಿತು….
ಹುಡುಗಿಯನ್ನು ನೋಡಿ ತಿಂಗಳುಗಳೇ ಕಳೆಯಿತು ಇನ್ನೂ ಕೂಡ ಯಾವ ಸಿಹಿಸುದ್ದಿಯೂ ಬಂದಿಲ್ಲ…ನಿಶ್ಚಿತಾರ್ಥಕ್ಕೆ ಒಳ್ಳೆ ಮುಹೂರ್ತ ಹುಡುಕಿ ತಿಳಿಸಿ ಎಂದು ಹೇಳಿ ಹೋದ ಮಿಥುನ್‌ನ ಸುದ್ದಿಯೇ ಇಲ್ಲ. ಮಂಗಳಳ ತಂದೆ ರಾಘವ ಭಾವಿ ಅಳಿಯನಿಗೆ ಕರೆಮಾಡಲು ಪ್ರಯತ್ನಿಸಿದರೆ ಕೊಟ್ಟ ನಂಬರ್ ಕರೆಗೂ ಸಿಗುತ್ತಿಲ್ಲ!ಸ್ವಿಚ್ ಆಫ್ ಬರುತ್ತಿತ್ತು.ಆಸೆಯ ಗೋಪುರ ಕಟ್ಟಿದ್ದ ರಾಘವನಿಗೆ ಬಡವರ ಹೆಣ್ಣು ಮಗಳು ಶ್ರೀಮಂತರಿಗೆ ಹೊಂದಾಣಿಕೆ ಆಗದೆ ಹೋಯಿತೆ…?ಹೀಗೆ ಕಲ್ಪನೆ ಚಿಂತೆಯಲ್ಲಿ ಪೋನ್ ಬದಿಗಿಟ್ಟು ಮಗಳ ಪಕ್ಕ ಬಂದು ಕುಳಿತ.ಮಧುಮಗಳಂತೆ ನಗುತುಂಬಿದ ಮಗಳನ್ನು ಕಂಡು ಅಪ್ಪಿಕೊಂಡು ಜೋರಾಗಿ ಅತ್ತುಬಿಟ್ಟ……?
(ಮುಂದುವರಿಯುವುದು)













