
ಬೆಂಗಳೂರು: ನಗರದ ಕಸ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜಿಪಿಎಸ್ ಅಳವಡಿಸದ ಕಸ ಸಂಗ್ರಹ ವಾಹನಗಳಿಗೆ ಪಾವತಿ ನೀಡುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಹೈಕೋರ್ಟ್ ಸೂಚನೆ ಇದ್ದರೂ ಜಿಪಿಎಸ್ ನಿಯಮ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹೊಸ ಟೆಂಡರ್ಗಳಲ್ಲಿ ಜಿಪಿಎಸ್ ಕಡ್ಡಾಯಗೊಳಿಸಲಾಗಿದೆ ಎಂದರು.
ಮನೆ ಮನೆಗೆ ಕಸ ಸಂಗ್ರಹಣೆ ಸರಿಯಾಗಿ ನಡೆಯಬೇಕು ಹಾಗೂ ನಗರದ ಕಸದ ಬ್ಲ್ಯಾಕ್ ಸ್ಪಾಟ್ಗಳನ್ನು ನಿವಾರಿಸಲು ಸೂಚನೆ ನೀಡಲಾಗಿದೆ. ಈಗಿನ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಸುಧಾರಿಸುವ ಕೆಲಸ ನಡೆಯಲಿದೆ ಎಂದು ತಿಳಿಸಿದರು.
ನಗರದ ಕೆಲ ಭಾಗಗಳಲ್ಲಿ ಕಸ ವಿಂಗಡಣೆ ಉತ್ತಮವಾಗಿದ್ದರೂ ಇನ್ನೂ ಹಲವು ಪ್ರದೇಶಗಳಲ್ಲಿ ಸಮಸ್ಯೆ ಮುಂದುವರಿದಿದೆ. ವಿಂಗಡಿಸದ ಕಸ ಸಂಗ್ರಹಿಸಿದರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಸ ನಿರ್ವಹಣೆಯಲ್ಲಿ ನಾಗರಿಕರ ಸಹಕಾರವೂ ಅಗತ್ಯವಾಗಿದ್ದು, ರಸ್ತೆ ಬದಿಗೆ ಕಸ ಎಸೆಯುವ ಪ್ರವೃತ್ತಿ ಕಡಿಮೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.

































