
ನವದೆಹಲಿ: ದೇಶದಾದ್ಯಂತ ಉಷ್ಣತೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ, ಬಿಸಿಲಿನಲ್ಲಿ ದುಡಿಯುವ ಕಾರ್ಮಿಕರ ಸುರಕ್ಷತೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬಿಸಿಗಾಳಿಯಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದ್ದು ಹೊರಾಂಗಣ ಕೆಲಸಗಾರರ ರಕ್ಷಣೆಗೆ ವಿಶೇಷ ಗಮನಹರಿಸಿ ಮಧ್ಯಾಹ್ನದ ತೀವ್ರ ಬಿಸಿಯಲ್ಲಿ ಕೆಲಸದ ಅವಧಿಯನ್ನು ಸರಿಹೊಂದಿಸಲು ಹೇಳಲಾಗಿದೆ.
ಕೆಲಸದ ಸ್ಥಳಗಳಲ್ಲಿ ತಣ್ಣನೆಯ ಕುಡಿಯುವ ನೀರು, ವಿಶ್ರಾಂತಿ ಸೌಲಭ್ಯಗಳು ಹಾಗೂ ಓಆರ್‌ಎಸ್ ಪ್ಯಾಕೆಟ್‌ಗಳನ್ನು ಒದಗಿಸುವಂತೆ ನಿರ್ದೇಶಿಸಲಾಗಿದ್ದು ಉದ್ಯಮಗಳ ಮುಖ್ಯಸ್ಥರೂ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.



















