
ಮಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಕ್ಷಿಕೆರೆ ಜೋಡಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣದಲ್ಲಿ ಒಂದೊಂದೇ ವಿಚಾರಗಳು ಬಯಲಾಗುತ್ತಿದ್ದು ಪತ್ನಿ ಹಾಗೂ ಮಗುವನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದ ಕಾರ್ತಿಕ್ ಭಟ್ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದೆ. ವಿಪರೀತ ಸಾಲದ ಸುಳಿಯಿಂದ ಬಳಲಿದ್ದ ಕಾರ್ತಿಕ್ ಭಟ್, ತನ್ನ ಸಂಸಾರದೊಂದಿಗೆ ಅನೇಕರನ್ನೂ ಸಮಸ್ಯೆಗೆ ಸಿಲುಕಿಸಿದ್ದ ಎಂಬ ವಿಚಾರ ಬಯಲಾಗಿದೆ.
ಕಾರ್ತಿಕ್ ಭಟ್ ಎಂಬಾತ ತನ್ನ ಪತ್ನಿ ಹಾಗೂ ನಾಲ್ಕು ವರ್ಷದ ಮಗುವನ್ನ ಕಿಟಕಿ ಗಾಜಿನಿಂದ ತಿವಿದು ಕೊಂದು ಬಳಿಕ ತಾನು ರೈಲಿಗೆ ತಲೆ ಕೊಟ್ಟು ಭೀಕರವಾಗಿ ಸಾವನ್ನಪ್ಪಿದ್ದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ ಹಾಗೂ ಅಕ್ಕ ಕಣ್ಮಣಿ ಬಂಧಿತರಾಗಿದ್ದಾರೆ. ಈ ಮಧ್ಯೆ ಕಾರ್ತಿಕ್ ವಿರುದ್ಧ ಸಾಲು ಸಾಲು ಅವ್ಯವಹಾರಗಳ ಆರೋಪ ಕೇಳಿಬರುತ್ತಿದೆ.
ಪಕ್ಷಿಕೆರೆ ನಿವಾಸಿ ಮಹಮ್ಮದ್ ಎಂಬುವವರು ತನ್ನ 80 ಗ್ರಾಂ ಚಿನ್ನವನ್ನ ಅಡವಿಟ್ಟು ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಕಾರ್ತಿಕ್ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಎರಡು ವರ್ಷದ ಹಿಂದೆ ಪಕ್ಷಿಕೆರೆ ಬ್ಯಾಂಕ್ವೊಂದರಲ್ಲಿ ತನ್ನ 80 ಗ್ರಾಂ ಚಿನ್ನವನ್ನು ಅಡವಿಟ್ಟು ಮಹಮ್ಮದ್ 1,60,000 ಸಾಲ ಪಡೆದಿದ್ದ. ಅವರಿಗೆ ಇನ್ನೂ ಹೆಚ್ಚಿನ ಸಾಲ ಬೇಕೆಂಬುದನ್ನು ಮನಗಂಡು ಕಾರ್ತಿಕ್ ತಾನು ಮ್ಯಾನೇಜರ್ ಆಗಿರುವ ಸುಬ್ರಹ್ಮಣ್ಯ ಸಹಕಾರಿ ಸಂಘದಲ್ಲಿ ಅಡವಿಟ್ಟರೆ ಹೆಚ್ಚಿನ ಸಾಲ ನೀಡುವುದಾಗಿ ಭರವಸೆ ನೀಡಿದ್ದ. ಹೆಚ್ಚಿನ ಸಾಲದ ಅಗತ್ಯತೆಯಿಂದ ಮಹಮ್ಮದ್, ಕಾರ್ತಿಕ್ ಮಾತನ್ನ ನಂಬಿ ಪಕ್ಷಿಕೆರೆ ಬ್ಯಾಂಕ್ನಲ್ಲಿ ಚಿನ್ನ ಅಡವಿಡುತ್ತಾರೆ. ಆ ಬಳಿಕ 3,04,000 ರೂ. ಸಾಲವನ್ನೂ ಪಡೆಯುತ್ತಾರೆ. ಆ ಬಳಿಕ ವೈಯುಕ್ತಿಕ ಸಮಸ್ಯೆಯಿಂದ ಮಹಮ್ಮದ್ ಆ ಊರಲ್ಲಿ ಇರದ ಕಾರಣ ಬ್ಯಾಂಕ್ಗೆ ಸರಿಯಾಗಿ ಭೇಟಿ ನೀಡುವುದಿಲ್ಲ. ಆದರೆ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಸಂಶಯಗೊಂಡ ಮಹಮ್ಮದ್, ಬ್ಯಾಂಕ್ನಲ್ಲಿ ತಾವು ಅಡವಿಟ್ಟ ಚಿನ್ನದ ಬಗ್ಗೆ ವಿಚಾರಿಸಿದಾಗ ಚಿನ್ನ ಅಡವಿಟ್ಟ 4 ತಿಂಗಳಲ್ಲೇ ಅಡವಿಟ್ಟ ಬಂಗಾರ ಬಿಡಿಸಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ವಿವರ ನೀಡಿದ್ದಾರೆ. ಕಾರ್ತಿಕ್ ಭಟ್ ಈ ಬಂಗಾರದ ಒಡವೆಗಳನ್ನು ಅಲ್ಲಿಂದ ಎಗರಿಸಿ ಅದರ ಮೂಲ ಬೆಲೆಗೆ ಮಾರಿದ್ದಾನೆ ಎಂದು ಬಂಗಾರದ ಒಡವೆ ಕಳೆದುಕೊಂಡ ಮಹಮ್ಮದ್ ಆರೋಪ ಮಾಡಿದ್ದಾರೆ.
ಇದಲ್ಲದೆ ಅನೇಕ ಜನರು ಕಾರ್ತಿಕ್ ಭಟ್ನಿಂದ ವಂಚನೆಗೆ ಒಳಗಾಗಿದ್ದೇವೆ ಎಂದು ಆರೋಪಿಸುತ್ತಿದ್ದು ಈ ಆರೋಪದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.



















