
ಜೈಪುರ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯು ನೀಟ್-ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪದ ಹಿನ್ನೆಲೆ, ಮೇ 3ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.
ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಂಡಿದ್ದು ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಜಾರಿ ಸಂಸ್ಥೆಗಳಿಂದ ಲಭಿಸಿದ ಮಾಹಿತಿಗಳನ್ನು ಪರಿಶೀಲಿಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ತನಿಖೆಯ ಪ್ರಾಥಮಿಕ ವರದಿಗಳ ಪ್ರಕಾರ, ಪರೀಕ್ಷಾ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿರುವ ಸಾಧ್ಯತೆ ಇರುವುದಾಗಿ ಹೇಳಲಾಗಿದೆ.






















