
ತುಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ದೇವದಾಸ್ ಕಾಪಿಕಾಡ್ ಅವರು ಕಲಾವಿದನಾಗಿ, ನಿರ್ದೇಶಕನಾಗಿ ಮಾತ್ರವಲ್ಲದೆ ರಂಗಭೂಮಿಯಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಇವರು ಸೆಪ್ಟೆಂಬರ್ 4ರಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸಮ್ಮುಖದಲ್ಲಿ ಆನ್ಲೈನ್ ಬಿಜಿಪಿ ಸದಸ್ಯತ್ವ ಪಡೆದಿದ್ದು ಈ ಬಗ್ಗೆ ಪಕ್ಷದ ಕಡೆಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಲಾಗಿತ್ತು.
ಸೆ.13 ಹಾಗೂ 14ರಂದು ಸೌದಿಯ ಜುಬೈಲ್ನ ಪುಲಿ ರೆಸ್ಟೋರೆಂಟ್ನಲ್ಲಿ ಇವರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ‘ಬಿಜೆಪಿ ಸದಸ್ಯತ್ವ ಪಡೆದ ಹಿನ್ನೆಲೆ ಕಾರ್ಯಕ್ರಮ ಬಹಿಷ್ಕರಿಸಿ’ ಎಂಬ ಪೋಸ್ಟ್ ವೈರಲ್ ಆಗಿದೆ. ಬಹಿಷ್ಕಾರ ಬೆದರಿಕೆ ಬೆನ್ನಲ್ಲೇ ಕಾಪಿಕಾಡ್ ಉಲ್ಟಾ ಹೊಡೆದಿದ್ದಾರೆ.ಈ ಕುರಿತು ಸ್ಪಷ್ಟನೆ ನೀಡಿರುವ ಕಾಪಿಕಾಡ್ ‘ನಾನು ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಬಿಜೆಪಿ ನಾಯಕರ ಜೊತೆ ಕೇವಲ ಸೌಹಾರ್ದ ಭೇಟಿ ನಡೆದಿದೆ. ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ. ಯಾವುದೇ ಪಕ್ಷಕ್ಕೆ ಸೇರ್ಪಡೆಯೂ ಆಗಿಲ್ಲ. ಎಲ್ಲಾ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸಂಬಂಧ ಇದೆ’ ಎಂದು ಹೇಳಿದ್ದಾರೆ.













