
ದೆಹಲಿಯ ಮುಂದಿನ ಮುಖ್ಯಮಂತ್ರಿಯಾಗಿ ಅತಿಶಿ ಮಾರ್ಲೆನಾ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೇಜ್ರಿವಾಲ್ ನಿವಾಸದಲ್ಲಿ ಬೆಳಗ್ಗೆಯಿಂದ ಸಭೆ ನಡೆದಿದ್ದು ಈ ಅವಧಿಯಲ್ಲಿ ಅನೇಕ ಹೆಸರುಗಳು ಕೇಳಿಬಂದಿದ್ದವು. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಅತಿಶಿ ಅವರ ಹೆಸರನ್ನು ಮುಂದಿಡಲಾಗಿತ್ತು. ಆದರೆ ಸಭೆಯಲ್ಲಿ ಅತಿಶಿ ಅವರ ಹೆಸರನ್ನು ಕೇಜ್ರಿವಾಲ್ ಘೋಷಿಸಿದಾಗ ಇತರ ನಾಯಕರು ಅವರನ್ನು ಬೆಂಬಲಿಸಿದರು ಎಂದು ತಿಳಿದುಬಂದಿದೆ.
ಕಳೆದ ವಾರ ಮದ್ಯ ನೀತಿ ಪ್ರಕರಣದಲ್ಲಿ ಜಾಮೀನು ಪಡೆದ ಕೇಜ್ರಿವಾಲ್ ಅವರು ಸೆಪ್ಟೆಂಬರ್ 15 ರಂದು ಎರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.
ದೆಹಲಿಯ ಮದ್ಯ ನೀತಿಯ ಪ್ರಕರಣದಲ್ಲಿ ಎಎಪಿ ನಾಯಕರು ಜೈಲಿಗೆ ಹೋಗಬೇಕಾದಾಗ, ಅತಿಶಿ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಂಡು ಅವರು ಪಕ್ಷಕ್ಕೆ ಅಪಾರ ನಿಷ್ಠೆ ತೋರಿದ್ದಾರೆ. ಈ ಹಿನ್ನಲೆಯಲ್ಲಿ ಅತಿಶಿ ಮಾರ್ಲೆನಾ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಇದೆ.













