
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಕೇವಲ ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಹಿಂದಿ ಸೇರಿದಂತೆ ಈ ವಿಷಯಗಳಿಗೆ ಪಡೆದ ಅಂಕಗಳನ್ನು ಕಡ್ಡಾಯವಾಗಿ ದಾಖಲಿಸಿ ಒಟ್ಟು ಫಲಿತಾಂಶದಲ್ಲಿ ಸೇರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ನೆಮ್ಮದಿ ಮೂಡಿದೆ.
ಈ ಕುರಿತು ಚಿಕ್ಕಮಗಳೂರಿನ ಸಹನಾ ಆರ್ ನಾಯ್ಕ್ ಹಾಗೂ ಇತರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಇಎಸ್ ಇಂದಿರೇಶ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದ್ದು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಪೀಠದ ಅಭಿಪ್ರಾಯದಲ್ಲಿ, ಗ್ರೇಡಿಂಗ್ ಮಾತ್ರ ನೀಡುವುದು ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧ. ಪ್ರತಿ ವಿಷಯಕ್ಕೂ ಸ್ಪಷ್ಟ ಅಂಕಗಳನ್ನು ನೀಡುವುದು ಅಗತ್ಯವಾಗಿದ್ದು, ಇಲ್ಲವಾದರೆ ಉನ್ನತ ಶಿಕ್ಷಣದ ಅವಕಾಶಗಳಿಗೆ ಧಕ್ಕೆಯಾಗಬಹುದು ಎಂದು ನ್ಯಾಯಾಲಯ ಹೇಳಿದೆ.
ರಾಜ್ಯದಲ್ಲಿ ತೃತೀಯ ಭಾಷೆಗೆ ಕೇವಲ ಅರ್ಹತಾ ಸ್ಥಾನ ನೀಡುವ ಉದ್ದೇಶದಿಂದ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು ಆದರೆ ಇದಕ್ಕೆ ಶಿಕ್ಷಕರು ಮತ್ತು ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿಷಯ ಭಾಷಾ ನೀತಿ ವಿವಾದಕ್ಕೂ ಕಾರಣವಾಗಿದ್ದು, ಅಂಕ ನೀಡದಿದ್ದರೆ ವಿದ್ಯಾರ್ಥಿಗಳ ಆಸಕ್ತಿ ಕುಗ್ಗುವ ಭೀತಿ ವ್ಯಕ್ತವಾಗಿತ್ತು. ಹೈಕೋರ್ಟ್ ತೀರ್ಪು ಈ ವಿವಾದಕ್ಕೆ ತಾತ್ಕಾಲಿಕ ಅಂತ್ಯ ಕಂಡುಕೊಟ್ಟಿದೆ.













