
ಅಮರಾವತಿ/ಬೆಂಗಳೂರು: ಭಾರತದ ಅತೀ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಪತಿ ವೆಂಕಟೇಶ್ವರ ಸನ್ನಿಧಿಯ ತಿರುಪತಿ ತಿಮ್ಮಪ್ಪನಿಗೆ ಲಕ್ಷಾಂತರ ಭಕ್ತರಿದ್ದು, ತಿರುಪತಿ ಲಡ್ಡು ವಿವಾದದ ನಂತರವೂ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ಕರ್ನಾಟಕದಿಂದಲೂ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಆಂಧ್ರ ಸಿಎಂಗೆ ಹೊಸ ಮನವಿ ಮಾಡಿದೆ.
ಭಕ್ತರ ಪಾಲಿಗೆ ಕಲಿಯುಗದ ವೈಕುಂಠನಾಗಿರುವ ತಿರುಮಲ ತಿರುಪತಿಯ ದರ್ಶನ ಪಡೆಯಲು ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಎರಡು ತೆಲುಗು ರಾಜ್ಯಗಳಲ್ಲದೆ, ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಆಪತ್ತುಗಳನ್ನು ನಿವಾರಿಸುವ ಏಡುಕೊಂಡಲವಾಡ ದರ್ಶನ ಪಡೆಯಲು ಜನ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಥವಾ ಕೆಎಸ್‌ಟಿಡಿಸಿಯ ಸೀಟ್‌ಗಳಿಗಾಗಿ ಪ್ರತಿದಿನ ಕಾಯುತ್ತಾರೆ. ಪ್ರತಿದಿನ ಟಿಟಿಡಿಯು ಕೆಎಸ್‌ಟಿಡಿಸಿಗೆ ಕರ್ನಾಟಕದ 250 ಭಕ್ತಾದಿಗಳಿಗೆ ನೇರ ದರ್ಶನಕ್ಕೆ ಸದ್ಯ ಅವಕಾಶ ನೀಡಿದೆ. ಆದರೂ ನೇರ ದರ್ಶನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿದೆ. ಇದು ತಿರುಪತಿ ಲಡ್ಡು ವಿವಾದದ ನಂತರವೂ ಮುಂದುವರೆದಿದೆ. ಈ ನಿಟ್ಟಿನಲ್ಲಿ ಕೆಎಸ್‌ಟಿಡಿಸಿಯು ಪ್ರತಿದಿನ 250 ಜನರಿಗೆ ನೇರ ದರ್ಶನದ ಸಂಖ್ಯೆಯನ್ನು, ಒಂದು ಸಾವಿರಕ್ಕೆ ಹೆಚ್ಚಿಸಬೇಕೆಂದು ಆಂಧ್ರ ಸಿಎಂಗೆ ಮನವಿ ಮಾಡಿದ್ದು, ಸದ್ಯ ಮಾತುಕತೆ ನಡೆದಿದೆ.
ಇನ್ನೂ ಸದ್ಯ 250 ಜನ ಭಕ್ತಾದಿಗಳಿಗೆ ನಿಗಮದಿಂದ ಪ್ರತಿನಿತ್ಯ 5-6 ಬಸ್‌ಗಳು ರಾಜ್ಯದಿಂದ ತೆರಳುತ್ತಿದ್ದವು. ಸಾವಿರ ಜನರಿಗೆ ಅವಕಾಶ ಸಿಕ್ಕರೇ, ರಾಜ್ಯದಿಂದ ತಿರುಪತಿಯತ್ತ 10-12 ಬಸ್‌ಗಳು ಪ್ರವಾಸೋದ್ಯಮ ಇಲಾಖೆಯಿಂದ ಸಂಚರಿಸಲಿವೆ. ಭಕ್ತಾದಿಗಳ ಸಂಖ್ಯೆ ಹೆಚ್ಚಾದರೂ ಅಲ್ಲಿನ ವಸತಿ ವ್ಯವಸ್ಥೆಗೆ ಆತಂಕಪಡಬೇಕಿಲ್ಲ. ಏಕೆಂದರೆ ತಿರುಪತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ 350 ರೂಮ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.













