
ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ ಇಲ್ಲಿ ಗ್ಲೋಬಲ್ ಪೇರೆಂಟ್ಸ್ ಡೇ ಮತ್ತು ಶಿಕ್ಷಕ- ಪೋಷಕ ಸಂಘದ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕರು ನಡೆಸಿದ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಪೋಷಕರು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿಕ್ಷಕ- ಪೋಷಕ ಕಮಿಟಿಯ ಶ್ರೀಮತಿ ಅಶ್ವಿತಾ ಶೆಟ್ಟಿ ಯವರು ನೆರವೇರಿಸಿದರು. ಅವರು ಮಾತನಾಡುತ್ತಾ, ಎಲ್ಲಾ ಪೋಷಕ ವರ್ಗದವರು ಶಾಲೆಗೆ ಸಹಕಾರವನ್ನು ನೀಡಿ. ಇನ್ನು ಮುಂದೆಯೂ ಈ ಶಾಲೆ ಉತ್ತಮವಾಗಿ ಅಭಿವೃದ್ಧಿ ಹೊಂದಲಿ ಎಂದರು.
ಜೈನ್ ಹೈ ಸ್ಕೂಲ್ ಮೂಡಬಿದ್ರೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಮುನಿರಾಜ್ ರೆಂಜಾಳ ಇವರು ಮಾತನಾಡತ್ತಾ, ಜೇಸಿ ಒಂದು ಅಚ್ಚುಕಟ್ಟಾದ ಸಂಸ್ಥೆ. ಇವತ್ತಿನ ಯಾವುದೇ ಗಿಮಿಕ್ ಗಳಿಗೂ ಕಿವಿಕೊಡದೆ ತಣ್ಣಗೆ ಕೆಲಸಗಳನ್ನು ಮಾಡುತ್ತಿದೆ. ಶಿಕ್ಷಣ ಮಗುವಿನ ಜೀವನಕ್ಕೆ ಎಷ್ಟು ಮುಖ್ಯ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಮಕ್ಕಳನ್ನು ಜೇಸಿ ಶಾಲೆಗೆ ಮಾರ್ಕ್ಸ್ ತೆಗೆಯಲು ಕಳಿಸುವುದಲ್ಲ, ಬದಲಾಗಿ ಸಂಸ್ಕಾರ ಕಲಿಯಲು. ಮಗುವಿನ ಹೆಸರಿನ ಎದುರು ತಂದೆ -ತಾಯಿ ಕೊಟ್ಟ ಚಿನ್ನ, ಹಣದ ಹೆಸರು ಬರುವುದಿಲ್ಲ. ಆದರೆ ಡಿಗ್ರಿಗಳನ್ನು ಪಡೆದ ತಕ್ಷಣ ಬರೆಯುತ್ತೇವೆ. ಇದು ದೊಡ್ಡ ಆಸ್ತಿ. ನಮ್ಮ ಮಕ್ಕಳ ಜವಾಬ್ದಾರಿ ಶಿಕ್ಷಕರದೆಂದು ಸುಮ್ಮನಿರಬಾರದು. ದೇವರ ಅಸ್ತಿತ್ವವನ್ನು ತಿಳಿಯುವುದು ಶಿಕ್ಷಣದ ಒಂದು ಭಾಗ. ಮಕ್ಕಳನ್ನು ದಡ್ಡರೆಂದು ತಿರಸ್ಕರಿಸಬೇಡಿ. ಮಕ್ಕಳಿಗೆ ಪ್ರೀತಿ ಕೊಡಿ. ಪ್ರತಿದಿನ ಮಕ್ಕಳಿಗೆ ಸ್ವಲ್ಪ ಸಮಯ ಕೊಡಿ. ನಮಗೆ ಹುಟ್ಟಿದ ಮಕ್ಕಳು ಅನ್ನವನ್ನು ಕೊಡುತ್ತಾರೋ ಗೊತ್ತಿಲ್ಲ. ನಾವು ಕಲಿಸುವ ಮಕ್ಕಳಿಂದ ನಾವು ಒಂದು ಹೊತ್ತಿನ ಅನ್ನವನ್ನು ತಿನ್ನುತ್ತೇವೆ ಎನ್ನುವ ಪ್ರಜ್ಞೆ ಶಿಕ್ಷಕರಲ್ಲಿ ಬೆಳೆಸಬೇಕು ಎಂದರು.
ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು ಮಾತನಾಡುತ್ತಾ, ಒಬ್ಬ ಪೋಷಕ ಸರಿಯಾಗಿ ಮಾರ್ಗದರ್ಶನ ನೀಡಬೇಕಾದರೆ ಗುರುಗಳ ಅಗತ್ಯವಿದೆ. ಇನ್ನು ಮುಂದೆ ಕೂಡ ನಿಮ್ಮ ಸಹಕಾರ ನಮಗೆ ಬೇಕು ಎಂದು ತಿಳಿಸಿದರು.
ನಂತರ ಶಿಕ್ಷಕ -ಪೋಷಕರ ಸಭೆಯನ್ನು ನಡೆಸಲಾಯಿತು ನೂತನ ಅಧ್ಯಕ್ಷ್ಯೆ PTA ಅಧ್ಯಕ್ಷರಾಗಿ ಶ್ರೀಮತಿ ಮಮತಾರವರು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಡಾ. ಶಂಕರನ್ ಪಿ ನಂಬೂಧರಿ ರವರು, ಹಾಗೂ ಶಾಲಾ ಆಡಳಿತಾಧಿಕಾರಿ ಪ್ರಣಿತ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಸ್ನೇಹ ರವರು ನಿರ್ವಹಿಸಿದರು. ಶ್ರೀಮತಿ ಅರ್ಚನ ರವರು ಸ್ವಾಗತಿಸಿದರು. ಶ್ರೀ ಸುರೇಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
































