ದರ್ಶನ್ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ನಟ ದರ್ಶನ್ ಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದು ವರ್ಷದವರೆಗೆ ಜಾಮೀನು ಕೋರುವ ಅವಕಾಶ ಇಲ್ಲ ಎಂಬ ಮೇ 15ರ ಆದೇಶದ ಕುರಿತು ಸ್ಪಷ್ಟೀಕರಣ ಕೋರಿ ಅಲರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ವೆಬ್ಸೈಟ್ನಲ್ಲಿ ಅರ್ಜಿ ಇತ್ಯರ್ಥವಾಗಿದೆ ಎಂದು ಉಲ್ಲೇಖಿಸಲಾಗಿದ್ದರೂ, ಈ ಸಂಬಂಧ ಯಾವುದೇ ಲಿಖಿತ ಆದೇಶ ಪ್ರಕಟವಾಗಿಲ್ಲ.
ಅರ್ಜಿಯನ್ನು ಪರಿಶೀಲಿಸಿದ ರಿಜಿಸ್ಟ್ರಾರ್, ಇದು ಸ್ಪಷ್ಟೀಕರಣ ಅರ್ಜಿಯಲ್ಲ. ತೀರ್ಪಿನ ಮರುಪರಿಶೀಲನೆ ಕೋರುವ ಪ್ರಯತ್ನವಾಗಿದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಈ ಹಿಂದೆ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾಯಪೀಠ, ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕು. ಒಂದು ವೇಳೆ ವಿಚಾರಣೆ ಮುಗಿಯದಿದ್ದರೆ ಮಾತ್ರ ದರ್ಶನ್ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ ಎಂದು ತಿಳಿಸಿತ್ತು.
ಪ್ರಮುಖ 60 ಸಾಕ್ಷಿಗಳ ವಿಚಾರಣೆಯಿಂದ ಆರಂಭಿಸಿ ಪ್ರತಿದಿನ ವಿಚಾರಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ, ಒಂದು ವರ್ಷದ ಷರತ್ತಿನ ಬಗ್ಗೆ ಸ್ಪಷ್ಟನೆ ನೀಡುವಂತೆ ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿದ್ದರು.
ವಿಚಾರಣೆ ನಿಧಾನಗತಿಯಲ್ಲಿರುವುದು, ದೀರ್ಘಕಾಲದ ಬಂಧನ, ಪ್ರಮುಖ ಸಾಕ್ಷಿಗಳ ವಿಚಾರಣೆ ಬಾಕಿ ಇರುವುದು, ವೈದ್ಯಕೀಯ ಅಥವಾ ಮಾನವೀಯ ಕಾರಣಗಳಿದ್ದರೆ ಪರಿಹಾರ ಕೋರುವ ಅವಕಾಶ ಇರಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
2025ರ ಆಗಸ್ಟ್ನಲ್ಲಿ ಜಾಮೀನು ರದ್ದಾದ ಬಳಿಕ ದರ್ಶನ್ ಬಂಧನದಲ್ಲಿದ್ದು, ನ್ಯಾಯಾಲಯದ ಎಲ್ಲ ಷರತ್ತುಗಳನ್ನು ಪಾಲಿಸಿದ್ದೇನೆ ಹಾಗೂ ವಿಚಾರಣೆಗೆ ಯಾವುದೇ ಅಡ್ಡಿ ಉಂಟುಪಡಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು.








































