
ಬೆಂಗಳೂರು: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಬಳ್ಳಾರಿ ಬಾಣಂತಿಯರ ಸಾವು ಹಾಗೂ ಕರ್ನಾಟಕದಲ್ಲಿ ಈ ವರ್ಷ ಒಟ್ಟಾರೆಯಾಗಿ ಸಂಭವಿಸಿರುವ ಬಾಣಂತಿಯರ ಸಾವಿನ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿರುವ ರೋಗಗ್ರಸ್ತ ಸರ್ಕಾರವಿದು ಎಂದು ಕಿಡಿಕಾರಿದ್ದಾರೆ.
ಪ್ರಗತಿಪರ ರಾಜ್ಯ ಕರ್ನಾಟಕದಲ್ಲಿ ಈ ವರ್ಷ 327 ಬಾಣಂತಿಯರು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ. ಸ್ವತಃ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ನೀಡಿರುವ ಈ ಮಾಹಿತಿ ನನಗೆ ಆಘಾತವುಂಟು ಮಾಡಿದೆ. ವೈದ್ಯ ಕ್ಷೇತ್ರದಲ್ಲಿ ಅಗಾಧ ಮುನ್ನಡೆ ಸಾಧಿಸಿರುವ ಈ ಆಧುನಿಕ ಕಾಲದಲ್ಲಿಯೂ ಮಹಿಳೆಯರು ಆಸ್ಪತ್ರೆಗಳಲ್ಲಿಯೇ ಜೀವ ಚೆಲ್ಲುತ್ತಿರುವುದು ರಾಜ್ಯಕ್ಕೆ ಗೌರವ ತರುವ ವಿಚಾರವಲ್ಲ ಎಂದು ಉಲ್ಲೇಖಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಗೃಹಲಕ್ಷ್ಮಿ ಗ್ಯಾರಂಟಿ ಕೊಟ್ಟು ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದ್ದೇವೆ ಎನ್ನುವ ಆಸ್ಪತ್ರೆಗಳಲ್ಲಿ ಅದೇ ಗೃಹಲಕ್ಷ್ಮೀಯರ ಜೀವಹರಣ ಮಾಡುತ್ತಿದೆ. ಮಗುವಿಗೆ ಜನ್ಮ ನೀಡಲು ಸರ್ಕಾರಿ ಆಸ್ಪತ್ರೆಗೆ ವಿಶ್ವಾಸದಿಂದ ತೆರಳುವ ಗೃಹಲಕ್ಷ್ಮಿಯರು ಜೀವಸಮೇತ ಮರಳಿ ಮನೆಗೆ ಬರುವ ಗ್ಯಾರಂಟಿಯೇ ಇಲ್ಲ! ಇದೇನಾ ಮಹಿಳೆಯರ ಸಬಲೀಕರಣ.
ರಾಜ್ಯದಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಸರ್ಕಾರಿ ಆಸ್ಪತ್ರೆಗಳು ಸಾವಿನ ಕೂಪಗಳಾಗಿವೆ. ಕಳಪೆ ಗ್ಲೂಕೋಸ್, ಔಷಧಗಳಿಂದ ಗೃಹಲಕ್ಷ್ಮೀಯರು ಬಲಿಯಾಗುತ್ತಿದ್ದಾರೆ. ಬಳ್ಳಾರಿ ಆಸ್ಪತ್ರೆಯಲ್ಲಿ IV ದ್ರಾವಣ, ಅಂದರೆ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪಡೆದ ಎರಡೇ ಗಂಟೆಯಲ್ಲಿ 9 ಬಾಣಂತಿಯರು ಅಸ್ವಸ್ಥರಾಗಿದ್ದರೆನ್ನುವುದು ಕಳವಳಕಾರಿ. ಹಾಗಾದರೆ, ಈ ದ್ರಾವಣ ಪೂರೈಸಿದ ಕಂಪನಿ ಯಾವುದು? ಅದು ಯಾರದ್ದು ಎಂದು ಪ್ರಶ್ನೆ ಮಾಡಿರುವ ಎಚ್‌ಡಿಕೆ ಈ ಮರಣಗಳಿಂದ ಸರ್ಕಾರ ನುಣಚಿಕೊಳ್ಳಲು ಸಾಧ್ಯವಿಲ್ಲ. ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಹದಗೆಟ್ಟ ಆರೋಗ್ಯ ವ್ಯವಸ್ಥೆಯನ್ನು ಹಳಿಗೆ ತರುವ ಕೆಲಸ ತುರ್ತಾಗಿ ಆಗಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.



















