
ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ವೇಳೆ ಜಾತಿ ವಿವರ ನೀಡುವುದು ಕಡ್ಡಾಯವಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸ್ಪಷ್ಟನೆ ನೀಡಿದೆ.
ರಾಜ್ಯಾದ್ಯಂತ ಮನೆಮನೆಗೆ ತೆರಳಿ ಫಲಾನುಭವಿಗಳ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಈ ವೇಳೆ ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್ಗಳು ಸೇವಾ ಸಿಂಧು ಮೊಬೈಲ್ ಆ್ಯಪ್ ಮತ್ತು ಘೋಷಣಾ ಪತ್ರದ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ಆದರೆ ಜಾತಿ ಹಾಗೂ ಉಪಜಾತಿ ವಿವರವನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಬೆಸ್ಕಾಂ ಸ್ಪಷ್ಟನೆ ನೀಡಿದೆ. ಫಲಾನುಭವಿಗಳ ಜಾತಿ ಮಾಹಿತಿಯನ್ನು ನೀಡುವುದು ಸಂಪೂರ್ಣ ಐಚ್ಛಿಕವಾಗಿದ್ದು, ಮಾಹಿತಿ ನೀಡಲು ಇಚ್ಛಿಸದಿದ್ದರೆ ಮೊಬೈಲ್ ಆ್ಯಪ್ನಲ್ಲಿ ‘ಮಾಹಿತಿ ನೀಡಲು ನಿರಾಕರಣೆ’ ಆಯ್ಕೆಯನ್ನು ದಾಖಲಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.








































