✍🏻 ಪ್ರಜ್ವಲಾ ಶೆಣೈ ಕಾರ್ಕಳ

ಗುರು ಜ್ಞಾನದ ಕಿರುದೀವಿಗೆ
ಗುರುವಿನಿಂದಲೇ ಶಕ್ತಿ ,ಗುರುವಿನಿಂದಲೇ ಭಕ್ತಿ,ಗುರುವಿನಿಂದಲೇ ಮುಕ್ತಿ, ಗುರುವಿನಿಂದಲೇ ಈ ಬದುಕಿಗೆ ಸಾರ್ಥಕತೆಯ ದೀಪ್ತಿ.ಆಷಾಡ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ತಲತಲಾಂತರಗಳಿಂದ ವಿಶ್ವದಾದ್ಯಂತ ಧರ್ಮಾತೀತವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ.ಗುರು ಎನ್ನುವ ಪದ ಸಂಸ್ಕೃತದಿಂದ ಬಂದಿದ್ದು, ಇದರ ಅರ್ಥ ಅಜ್ಞಾನದಿಂದ ಮುಕ್ತಗೊಳಿಸುವವನು ಎಂದು.ಗುರು ಪರಂಪರೆಯಲ್ಲಿ ಆದಿ ಗುರು ಎಂದು ಕರೆಯಲ್ಪಡುವ ವೇದವ್ಯಾಸ ಗುರುಗಳು ಇದೇ ದಿನ ಜನ್ಮ ತಾಳಿದರೆಂದು ಪುರಾಣಗಳಲ್ಲಿ ಉಲ್ಲೇಖಗಳಿವೆ.ಹೀಗಾಗಿ ಈ ದಿನವನ್ನು ವ್ಯಾಸ ಪೂರ್ಣಿಮೆಯೆಂದೂ ಕರೆಯಲಾಗಿದೆ.
ಗುರುವೇ ಜ್ಞಾನದ ಜ್ಯೋತಿ
ಈ ಬದುಕಿಗೆ ಉಸಿರು ಕೊಟ್ಟವಳು ತಾಯಿ, ಹೆಸರು ಕೊಟ್ಟವನು ತಂದೆ, ಆದರೆ ಈ ಹೆಸರನ್ನು ಉಸಿರು ಇರುವ ತನಕ ನೆನಪಿನಲ್ಲಿಡಲು ವಿದ್ಯೆ ಕಲಿಸಿದವನು ಗುರು.ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ತಂದೆ ತಾಯಿಯ ನಂತರದ ಸ್ಥಾನದಲ್ಲಿ ಗುರುಗಳು ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಮಾತೃ ದೇವೋ ಭವ ,ಪಿತೃ ದೇವೋ ಭವ, ಆಚಾರ್ಯ ದೇವೋಭವ, ಎಂದು ತಂದೆ,ತಾಯಿ,ಗುರುವಿನಲ್ಲಿ ಭಗವಂತನನ್ನು ಕಾಣುವ ಸನಾತನ ಸಂಸ್ಕೃತಿ ನಮ್ಮದು. ಜ್ಞಾನ, ಸಂಸ್ಕಾರ, ವಿದ್ಯೆಯನ್ನು ಕಲಿತು ಗುರುಗಳ ಆಶೀರ್ವಾದವನ್ನು ಪಡೆದುಕೊಂಡು, ವಿದ್ಯೆಯೊಂದಿಗೆ ವಿನಯತೆಯನ್ನು ಮೈಗೂಡಿಸಿಕೊಂಡಿರುವ ಶ್ರೀಮಂತ ಪರಂಪರೆ ನಮ್ಮದು. ಶಿಕ್ಷಣವೆಂದರೆ ಕಲಿಕೆ ಅಷ್ಟೇ ಅಲ್ಲ, ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಟ್ಟಿಕೊಡುವ ಸುಂದರವಾದ ಪರಿಕಲ್ಪನೆ. ಇಂತಹ ಜ್ಞಾನದ ಜ್ಯೋತಿ ಉರಿಯುತ್ತಿರುವವರೆಗೆ ಗುರುಶಿಷ್ಯ ಪರಂಪರೆಯು ನಿರಂತರವಾಗಿ ಮುಂದುವರೆಯುವುದು.
ಗುರುವೇ ವ್ಯಕ್ತಿತ್ವದ ಶಿಲ್ಪಿ
ಗುರುವಿನ ಅನುಗ್ರಹವಿದ್ದರೆ ಏನನ್ನಾದರೂ ಸಾಧಿಸಬಹುದು. ಸಾಗರದಂತೆ ವಿಸ್ತಾರವಾಗಿರುವ ಗುರುವಿನ ಜ್ಞಾನ ಅಪಾರ. ನಾವು ಶ್ರದ್ಧೆಯಿಂದ ಎಷ್ಟು ತೆರೆದುಕೊಳ್ಳುತ್ತೇವೋ, ಅಷ್ಟೇ ಜ್ಞಾನವನ್ನು ತುಂಬಿಕೊಳ್ಳುತ್ತೇವೆ. ಕತ್ತಲ ಕೋಣೆಯಲ್ಲಿ ಕಿರು ಹಣತೆಯೊಂದು ಬೆಳಕ ತುಂಬಿದಂತೆ ಶಿಷ್ಯನ ಮಸ್ತಕದಲ್ಲಿ ಜ್ಞಾನ ದೀಪವನ್ನು ಹಚ್ಚುವವನು ನಿಜವಾದ ಗುರು. ಕಲ್ಲೊಂದು ಸಾಮಾನ್ಯರ ಕಣ್ಣಿಗೆ ಬರಿಯ ಕಲ್ಲಂತೆ ಕಂಡರೆ ಶಿಲ್ಪಿಗೆ ಅದು ವಿಗ್ರಹದಂತೆ ಕಾಣುವುದು. ಕೆತ್ತಿ, ಉಜ್ಜಿ , ಹೊಳಪನ್ನು ನೀಡಿ ವಿಗ್ರಹದ ರೂಪ ಕೊಟ್ಟ ಶಿಲ್ಪಿಯಂತೆ ಗುರು ತನ್ನ ಶಿಷ್ಯನ ತಪ್ಪನ್ನು ತಿದ್ದಿ, ತೀಡಿ, ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿ.ಗುರು ಕೇವಲ ಶಿಕ್ಷಣ ನೀಡುವವನು ಮಾತ್ರವಲ್ಲ , ಪ್ರಾಮಾಣಿಕತೆ,ಸತ್ಯಸಂಧತೆ, ನ್ಯಾಯ, ನೀತಿ, ಆದರ್ಶ,ಜೀವನದ ಮೌಲ್ಯ ಹಾಗೂ ಬದುಕಿನ ಪಾಠವನ್ನು ಕಲಿಸುವ ಮಹಾನ್ ಚೇತನ.
ಅರಿವೇ ಗುರು
ಗುರುವೆಂದರೆ ಅರಿವಿನ ಆಗರ, ಜ್ಞಾನ ಪಾಂಡಿತ್ಯದ ಸಾಗರ,ಗುರುವಿನ ಮಹಿಮೆ ಅಪಾರ.ಸರಿ ತಪ್ಪುಗಳ,ಬೇಕು,ಬೇಡಗಳ,ಗುರಿ ಸಾಧನೆಯ ಹಠ, ಶಿಸ್ತು ಕಲಿಸುವ ದಿವ್ಯ ಜ್ಞಾನಿ.ಏನನ್ನಾದರೂ ಸಾಧಿಸಲು ಮುಂದೆ ಗುರಿ ಇರಬೇಕು,ಹಿಂದೆ ಗುರುವಿರಬೇಕು ಎನ್ನುವ ಮಾತಿದೆ.ನಮ್ಮ ಜೀವನದಲ್ಲಿ ಬದುಕಿನ ಪ್ರತೀ ಹಂತದಲ್ಲೂ ಅದೆಷ್ಟೋ ಮಂದಿ ದಾರಿ ತೋರಿ ನಿಜವಾದ ಅರ್ಥದಲ್ಲಿ ಗುರುವಾಗಿದ್ದಾರೆ. ಕತ್ತಲೆಯಲ್ಲಿ ಬೆಳಕಿನ ದಾರಿ ತೋರಿ ಅರಿವಿನ ಹಣತೆ ಹಚ್ಚಿದ ಗುರುಗಳನ್ನು ನೆನಪಿಸಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬ ಶಿಷ್ಯನ ಆದ್ಯ ಕರ್ತವ್ಯ.
ಗುರುವೆಂದರೆ ಅದ್ಭುತ ಶಕ್ತಿ
ಆತ್ಮ ಜ್ಞಾನವನ್ನು ಚೈತನ್ಯ ಗೊಳಿಸುವ ಶಕ್ತಿ ಇರುವುದು ಗುರುಗಳಿಗೆ ಮಾತ್ರ.ಜ್ಞಾನವೆಂದರೆ ಅದು ಬರಿದಾಗದ ಅಕ್ಷಯಪಾತ್ರೆ.ಅಕ್ಷರವೆಂಬ ದಿವ್ಯ ಲಿಪಿಯನ್ನು ಪರಿಚಯಿಸಿ,ಅರಿವಿನ ದೀಪವನ್ನು ಹಚ್ಚಿ ಆತ್ಮ ವಿಶ್ವಾಸದಿಂದ ಮುನ್ನಡೆಸುವವನು ಗುರು.ಅಜ್ಞಾನವೆಂಬ ಕಳೆಯನ್ನು ಕಿತ್ತು,ಜ್ಞಾನದ ಬೀಜವನ್ನು ಬಿತ್ತಿ,ನ್ಯಾಯ ನೀತಿ,ಪ್ರಾಮಾಣಿಕತೆಯ ಗೊಬ್ಬರ ಹಾಕಿ ಸುಸಂಸ್ಕೃತನನ್ನಾಗಿ ಮಾಡಿದ ಗುರುವಿಗೆ ನಮ್ಮೆಲ್ಲರ ನಮನ ಸಲ್ಲ ಬೇಕಾಗಿದೆ.ಗುರುಭಕ್ತಿಯೇ ಗುರಿಯನ್ನು ಜಯಿಸುವ ಮಹಾನ್ ಶಕ್ತಿಯಾಗಿದೆ.ಹೀಗಾಗಿ ಭಕ್ತಿಯಿಂದ ಗುರುನಮನವನ್ನು ಸಲ್ಲಿಸೋಣ.
ಗುರುಪೂರ್ಣಿಮೆಯ ಹಿನ್ನಲೆ ಮತ್ತು ಮಹತ್ವ
ನಮ್ಮ ಗುರುಗಳನ್ನು ಗೌರವಿಸುವುದು, ವಿನಯದಿಂದ ವರ್ತಿಸುವುದು ನಾವು ಗುರುಗಳಿಗೆ ನೀಡುವ ನಿಜವಾದ ಗುರುದಕ್ಷಿಣೆ. ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ ಎಂದು ನಾವು ಪೂಜಿಸುತ್ತೇವೆ. ಬ್ರಹ್ಮನು ಜೀವಿಯನ್ನು ಸೃಷ್ಟಿಸಿ ಸೃಷ್ಟಿಕರ್ತ ಎನಿಸಿ ಕೊಂಡರೆ,ಗುರು ತನ್ನ ಶಿಷ್ಯನ ವ್ಯಕ್ತಿತ್ವವನ್ನು ರೂಪಿಸುವ ಶಿಲ್ಪಿಯಾಗುತ್ತಾನೆ.ಗುರುಪರಂಪರೆಯಲ್ಲಿ ಆದಿ ಗುರು,ಬ್ರಹ್ಮರ್ಷಿ ಎಂದೇ ಹೆಸರಾಗಿರುವ ವೇದವ್ಯಾಸ ಗುರುಗಳನ್ನು ಕೃತಜ್ಞತಾಪೂರ್ವಕವಾಗಿ ಪೂಜಿಸಲಾಗುತ್ತದೆ.ಗುರುಗಳನ್ನು ಪೂಜಿಸುವ ಪರಿಪಾಠವನ್ನು ಜಗದ್ಗುರು ಶಂಕರಾಚಾರ್ಯರು ಆರಂಭಿಸಿದ್ದರು ಎನ್ನಲಾಗಿದೆ.ವೇದವ್ಯಾಸರು ನಾಲ್ಕು ವೇದಗಳಾದ ಋಗ್ವೇದ ,ಯಜುರ್ವೇದ, ಸಾಮವೇದ, ಅಥರ್ವ ವೇದಗಳನ್ನು ರಚಿಸಿ ಅದನ್ನು ತನ್ನ ನಾಲ್ಕು ಶಿಷ್ಯರಾದ ಸುಮಂತು, ವೈಶಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ಆಧ್ಯಾತ್ಮಿಕ ತಳಹದಿಯನ್ನು ಹಾಕಿ ಕೊಟ್ಟರು. ಮಹಾಭಾರತದ 18 ಅಧ್ಯಾಯಗಳ ಮಹಾಕಾವ್ಯವನ್ನು ರಚಿಸಿ ಅನೇಕ ಪುರಾಣಗಳಿಗೆ ಅಡಿಪಾಯವನ್ನು ಹಾಕಿಕೊಟ್ಟರು. ಬಾದರಾಯಾಣರು 555 ಶ್ಲೋಕಗಳಿರುವ ಬ್ರಹ್ಮ ಸೂತ್ರವನ್ನು ರಚಿಸಿದರು ಎನ್ನಲಾಗಿದೆ. ಮಹಾಭಾರತದ ಕರ್ತೃರಾದ ವೇದವ್ಯಾಸರೇ ಬ್ರಹ್ಮ ಸೂತ್ರ ರಚಿಸಿದ ಬಾದರಾಯಣರು ಎಂಬ
ಪ್ರತೀತಿಯಿದೆ.ಈ ಎಲ್ಲಾ ಕಾರಣಗಳಿಂದಾಗಿ ವೇದವ್ಯಾಸ ಗುರುಗಳನ್ನು ಗುರು ಪೂರ್ಣಿಮೆಯ ದಿನ ಆರಾಧಿಸಲಾಗುತ್ತದೆ. ಗುರುಪೂರ್ಣಿಮೆಯ ಸುತ್ತ ಅನೇಕ ದಂತ ಕಥೆಗಳಿವೆ. ಇದು ಕೇವಲ ಹಿಂದುಗಳ ಹಬ್ಬವಲ್ಲ, ಬೌದ್ಧರು ಹಾಗೂ ಜೈನರು ಕೂಡ ಗುರುಪೂರ್ಣಿಮೆಯನ್ನು ಧರ್ಮಾತೀತವಾಗಿ ಆಚರಿಸುವರು.ಭಗವಾನ್ ಶ್ರೀಕೃಷ್ಣನನ್ನು ಜಗತ್ತಿನ ಗುರು ಎಂದು ಪೂಜಿಸಲಾಗುತ್ತದೆ.ಜೈನರು ಮಹಾವೀರನನ್ನು ಅಂದು ಭಕ್ತಿಯಿಂದ ಆರಾಧಿಸುತ್ತಾರೆ. ಈ ದಿನದಂದು ಶಿವನು ಸಪ್ತ ಋಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದನೆಂದು ನಂಬಲಾಗಿದೆ.ಇದೇ ಕಾರಣದಿಂದ ಮಹಾಶಿವನನ್ನು ಗುರುವೆಂದು ಪೂಜಿಸುವರು.ಕೆಲವು ಭಾಗಗಳಲ್ಲಿ ಬೌದ್ಧರು ಈ ದಿನವನ್ನು ಬುದ್ಧಪೂರ್ಣಿಮೆ ಎಂದು ಆಚರಿಸುವರು. ಈ ದಿನದಂದು ಭಗವಾನ್ ಶ್ರೀ ಬುದ್ಧನು ತನ್ನ ಮೊದಲ ಧರ್ಮೋಪದೇಶ ನೀಡಿದನೆಂದು ಹೇಳಲಾಗಿದೆ ಬೌದ್ಧರು ಬುದ್ಧನಿಗೆ ಗೌರವ ಸಲ್ಲಿಸಲು ಗುರು ಪೂರ್ಣಿಮೆಯನ್ನು ಕೃತಜ್ಞತಾ ಭಾವದಿಂದ ಆಚರಿಸುವರು.
ಗುರುಪೂರ್ಣಿಮೆಯ ಆಚರಣೆ
ಗುರುಪೂರ್ಣಿಮೆಯನ್ನು ಶಾಲಾ, ಕಾಲೇಜು,ವಿಶ್ವ ವಿದ್ಯಾಲಯಗಳಲ್ಲಿ ಆಚರಿಸುವರು.ಗುರುಪೂರ್ಣಿಮೆಯನ್ನು
ಆಧ್ಯಾತ್ಮಿಕವಾಗಿ,ಶೈಕ್ಷಣಿಕವಾಗಿ ಹಾಗೆಯೇ ಧಾರ್ಮಿಕವಾಗಿಯೂ ಆಚರಿಸಲಾಗುತ್ತದೆ.ಹಲವಾರು ಮಂದಿರಗಳಲ್ಲಿ ವ್ಯಾಸಪೂಜೆಯನ್ನು ಕೈಗೊಳ್ಳಲಾಗುತ್ತದೆ.ಹೂವು,ಹಣ್ಣು,ಸಿಹಿಯನ್ನು ಪ್ರಸಾದ ರೂಪದಲ್ಲಿ ಹಂಚಿ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ.ವೇದವ್ಯಾಸರಿಂದ ರಚಿತವಾದ ಗುರುಗೀತಾ ಮಂತ್ರ ಹಾಗೂ ಬ್ರಹ್ಮ ಸೂತ್ರಗಳನ್ನು ಪಠಣ ಮಾಡಲಾಗುತ್ತದೆ.ಅನೇಕ ಆಶ್ರಮ, ಮಠ,ಗುರುಪೀಠಗಳಲ್ಲಿ ಪಾದ ಪೂಜೆಯ ಸೇವೆಯನ್ನು ಸಲ್ಲಿಸಲಾಗುತ್ತದೆ.ಹೂವಿನ ಅಲಂಕಾರದಿಂದ ದೇವಾಲಯವನ್ನು ಅಲಂಕೃತ ಗೊಳಿಸಲಾಗುತ್ತದೆ.ಗುರು ಪೂರ್ಣಿಮೆಯ ದಿನದಂದೇ ಚಾತುರ್ಮಾಸ ವ್ರತಾಚರಣೆ ಆರಂಭಗೊಳ್ಳುವುದು ಇನ್ನೊಂದು ವಿಶೇಷ.ಎಡವುವ ಹೆಜ್ಜೆಗಳನ್ನು ದೃಢವಾಗಿ ಇರಿಸಿ,ಬದುಕಿಗೆ ಅರಿವನ್ನು ತುಂಬಿದ ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.ಸರ್ವರಿಗೂ ಗುರುಪೂರ್ಣಿಮೆ ಶುಭವನ್ನು ಹೊತ್ತು ತರಲಿ.ಸರ್ವೇ ಜನಾಃ ಸುಖಿನೋ ಭವಂತು.




















































































