
ಬೆಂಗಳೂರು: ಕೊನೆಗೂ ಕೇಂದ್ರ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡುದಾರರಿಗೆ ಉಚಿತ ಅಕ್ಕಿ ನೀಡುವುದಕ್ಕಾಗಿ ಕರ್ನಾಟಕಕ್ಕೆ ಅಕ್ಕಿ ಪೂರೈಸಲು ಸಿದ್ಧವಿದೆ ಎಂದು ಹೇಳಿದೆ ಎಂದು ಭಾರತೀಯ ಆಹಾರ ನಿಗಮ (ಎಫ್‌ಸಿಐ) ಈಗಾಗಲೇ ಘೋಷಣೆ ಮಾಡಿದೆ.
ಹೀಗಾಗಿ ಫಲಾನುಭವಿಗಳಿಗೆ ಈಗ ನೀಡುತ್ತಿರುವ 170 ರೂಪಾಯಿಗಳ ಬದಲಿಗೆ 5 ಕೆಜಿ ಅಕ್ಕಿ ಹೆಚ್ಚು ಸಿಗುವ ಸಾಧ್ಯತೆಯಿದೆ. ಕಳೆದ ವರ್ಷ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು ಆದರೆ, ಇದೀಗ ನಿರ್ಧಾರ ಬದಲಾಯಿಸಿದೆ.
ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗಾಗಿ 2.38 ಲಕ್ಷ ಟನ್ ಅಕ್ಕಿಯನ್ನು ಪೂರೈಸಲು ಮನವಿ ಮಾಡಿದೆ. ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಎಫ್‌ಸಿಐನ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಮಹೇಶ್ವರಪ್ಪ ಬಿಒ ಬುಧವಾರ ತಿಳಿಸಿದ್ದಾರೆ.













