
ಪುಣೆ: ಲೋಹಗಡ ಕೋಟೆಯಲ್ಲಿ ನಿಶ್ಚಿತ ವರ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿರುವ ನಡುವೆ, ಆರೋಪಿ ಸಿಯಾ ಗೋಯಲ್ ಅವರ ತಂದೆಯ ಹೇಳಿಕೆ ಗಮನ ಸೆಳೆದಿದೆ. ಮಗಳು ತಪ್ಪಿತಸ್ಥಳೆಂದು ಸಾಬೀತಾದರೆ, ಕೇತನ್‌ನನ್ನು ತಳ್ಳಿದ ಅದೇ ಸ್ಥಳದಲ್ಲಿ ಆಕೆಯ ಮೇಲೂ ಕಠಿಣ ಕ್ರಮವಾಗಬೇಕು ಎಂದು ಪ್ರವೀಣ್ ಗೋಯಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇತನ್ ತಮ್ಮ ಮಗನಂತಿದ್ದ ಎಂದು ಹೇಳಿದ್ದು, ಮದುವೆ ಸಂಭ್ರಮದಲ್ಲಿದ್ದ ಎರಡೂ ಕುಟುಂಬಗಳಿಗೆ ಈ ಘಟನೆ ದೊಡ್ಡ ಆಘಾತವಾಗಿದೆ ಎಂದಿದ್ದಾರೆ. ಸಿಯಾ ಇಂತಹ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಎಂದಿಗೂ ಭಾವಿಸಿರಲಿಲ್ಲ ಎಂದು ತಿಳಿಸಿದ್ದಾರೆ.
ಸಿಯಾ ತಾಯಿಯೂ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಆರೋಪ ಸಾಬೀತಾದರೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಸಿಯಾಗೆ ಬೇರೊಬ್ಬರೊಂದಿಗೆ ಸಂಬಂಧವಿತ್ತು ಎಂಬ ವಿಚಾರ ನಮಗೆ ಮೊದಲೇ ತಿಳಿದಿತ್ತು ಎಂಬ ಆರೋಪಗಳನ್ನು ಕುಟುಂಬ ನಿರಾಕರಿಸಿದ್ದು, ಯಾವುದೇ ವಿಚಾರವನ್ನು ಮರೆಮಾಚಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸುವ ಸಾಧ್ಯತೆ ಇದೆ. ಎನ್‌ಸಿಪಿ ನಾಯಕ ಸುನಿಲ್ ಶೆಲ್ಕೆ ಕೂಡ ಕೇತನ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸರ ಪ್ರಕಾರ, ಜೂನ್ 18ರಂದು ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಪೂರ್ವಯೋಜಿತವಾಗಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರಂಭದಲ್ಲಿ ಆರೋಪಿಗಳು ತಪ್ಪು ಒಪ್ಪದಿದ್ದರೂ, ನಂತರ ವಿಚಾರಣೆಯಲ್ಲಿ ಯೋಜನೆ ರೂಪಿಸಿ ಕೃತ್ಯ ನಡೆಸಿದ್ದಾಗಿ ಸಿಯಾ ಒಪ್ಪಿಕೊಂಡಿದ್ದಾಳೆ ಎಂದು ಪಿಟಿಐ ವರದಿ ತಿಳಿಸಿದೆ.





















































































