
ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಮುಖ ಆರೋಪಿ ಚೇತನ್ ಚೌಧರಿ, ಲೋಹಗಢ ಕೋಟೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಘಟನಾ ಕ್ರಮವನ್ನು ಪೊಲೀಸರ ಎದುರು ಮರುಸೃಷ್ಟಿ ಮಾಡಿದ್ದಾನೆ.
ತನಿಖೆ ವೇಳೆ, “ಸಿಯಾ ಗೋಯಲ್ ಸಂಕೇತ ನೀಡಿದ ಬಳಿಕವೇ ಕೇತನ್ ಅವರನ್ನು ಕಂದಕಕ್ಕೆ ತಳ್ಳಿದ್ದೇವೆ” ಎಂದು ಚೇತನ್ ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಹೇಳಿಕೆಯನ್ನು ಪ್ರಕರಣದ ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಲಾಗಿದೆ.
ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದ ಪೊಲೀಸರು, ಕೇತನ್ ಅವರನ್ನು ಕರೆದುಕೊಂಡು ಹೋದ ದಾರಿ, ನಿಲ್ಲಿಸಿದ ಸ್ಥಳ ಹಾಗೂ ಕಂದಕಕ್ಕೆ ತಳ್ಳಿದ ರೀತಿಯನ್ನು ಮರುಸೃಷ್ಟಿಸಿದರು. ಈ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೊದಲ್ಲೂ ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಪ್ರವಾಸದ ನೆಪದಲ್ಲಿ ಕೇತನ್ ಅವರನ್ನು ಲೋಹಗಢ ಕೋಟೆಗೆ ಕರೆಸಿಕೊಂಡು, ಸೂಕ್ತ ಸಮಯ ನೋಡಿಕೊಂಡು ಸಿಯಾ ಸಂಕೇತ ನೀಡಿದ ಬಳಿಕ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣದಲ್ಲಿ ಸಿಯಾ ಗೋಯಲ್, ಚೇತನ್ ಚೌಧರಿ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ, ಸಂಚು ಹಾಗೂ ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳಡಿ ತನಿಖೆ ಮುಂದುವರಿದಿದೆ. ಡಿಜಿಟಲ್ ಸಾಕ್ಷ್ಯ, ಕರೆ ವಿವರಗಳು ಮತ್ತು ಆರೋಪಿಗಳ ಹೇಳಿಕೆಗಳ ಆಧಾರದಲ್ಲಿ ಆರೋಪಪಟ್ಟಿ ಸಿದ್ಧಪಡಿಸುವ ಕಾರ್ಯವೂ ವೇಗವಾಗಿ ಸಾಗುತ್ತಿದೆ.








































