ಆರೋಪಿ ಬಂಧನ

ಕಾರ್ಕಳ: ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ‘Sudhakar Appu Nitte’ ಎಂಬ ಖಾತೆಯಲ್ಲಿ ಪರ್ಯಾಯ ಉತ್ಸವಕ್ಕೆ ಜಿಲ್ಲಾ ಮುಸ್ಲಿಂ ಸ್ನೇಹ ಸಮಿತಿಯು ನೀಡಲಿರುವ ಸಹಕಾರದ ಕುರಿತು ಧರ್ಮ-ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ರೀತಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
“ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಇರಬೇಕಾದರೆ ಈ ಸೌಹಾರ್ದ ಸಮಿತಿಯವರಿಗೆ ಎಷ್ಟೋ ಕಾರ್ಯಗಳಿವೆ. ಅದನ್ನು ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ ‘ಧಫ್ ದುಫ್ ಡಮ್’ ಅಂತ ಕಾರ್ಯಕ್ರಮ ಮಾಡುವ ಅಗತ್ಯವಿಲ್ಲ. ಪರ್ಯಾಯದಲ್ಲಿ ಶರಬತ್, ನೀರಿನ ಬಾಟಲಿ ಹಂಚಿನ ಕೂಡಲೆ ಸೌಹಾರ್ದ ಬೆಳೆಯಲ್ಲ. ಇದರಿಂದ ಹಿಂದುಗಳಿಗೆ ನಿಮ್ಮ ಮೇಲೆ ನಂಬಿಕೆ ಹೆಚ್ಚಲ್ಲ, ಬಾಕಿದ್ದನ್ನು ಹೇಳಬೇಕಾದವರು ಹೇಳಿದ್ದಾರೆ” ಎಂದು ಬರೆದು ಹಂಚಿಕೊಳ್ಳಲಾಗಿತ್ತು.
ಇದು ಧರ್ಮ-ಧರ್ಮ, ಜನಾಂಗಗಳ ಮಧ್ಯೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾರ್ವಜನಿಕ ಸಾಮರಸ್ಯಕ್ಕೆ ತೊಂದರೆ ಮಾಡುವ ಪೋಸ್ಟ್ ಎಂಬ ಕಾರಣಕ್ಕೆ ಅಪರಾಧ ಕ್ರಮಾಂಕ 01/2026 ಕಲಂ 196(1), 353(2), 352 ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಿಸಿ ಆರೋಪಿ ಸುಧಾಕರ್ (37) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.






