ವೈರಲ್ ಆದ ಶಿಲ್ಪಿ ಕೃಷ್ಣ ನಾಯ್ಕ ವೀಡಿಯೋ…

ಬೆಂಗಳೂರು: ಕಾರ್ಕಳ ಪೊಲೀಸರು ಶನಿವಾರ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣ ಸಂಬಂಧ ಬೆಂಗಳೂರಿನ ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸ್ಥಳ ಮಹಜರು ಮಾಡಿದ್ದಾರೆ.
ಕಾರ್ಕಳ ಟೌನ್ ಠಾಣೆ ಪೊಲೀಸರ ತಂಡವು ಬೆಂಗಳೂರಿಗೆ ಆಗಮಿಸಿ ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸಂಗ್ರಹಿಸಿದ್ದ ಪ್ರತಿಮೆಗೆ ಬೇಕಾದ ವಸ್ತುಗಳು ಸೇರಿದಂತೆ ಪ್ರತಿಮೆ ನಿರ್ಮಾಣಕ್ಕೆ ಬಳಸಿದ್ದ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ..
ಪ್ರಕರಣದ ಹಿನ್ನೆಲೆ:
ಕಾರ್ಕಳ ಮಾಜಿ ಸಚಿವ, ಹಾಲಿ ಶಾಸಕ ಸುನೀಲ್ ಕುಮಾರ್ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಿದ್ದು ಕಾಮಗಾರಿ ಪೂರ್ಣಗೊಳ್ಳದೇ ಈ ಥೀಮ್ ಪಾರ್ಕ್ ಉದ್ಘಾಟನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಸಂಬಂಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಐಡಿ ತನಿಖೆಗೆ ಆದೇಶಿಸಿದ್ದರು.
ಉದ್ಘಾಟನೆಯಾದ ಬಳಿಕ ಸಿಡಿಲು ನಿರೋಧಕ ಅಳವಡಿಕೆ ಮತ್ತು ಇನ್ನಿತರ ಬಾಕಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಥೀಮ್ ಪಾರ್ಕ್ ಬಂದ್ ಮಾಡಿರುವ ವಿಚಾರವಾಗಿ, ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಪರಶುರಾಮನ ಮೂರ್ತಿ ನಕಲಿ ಎನ್ನುವ ಮೂಲಕ ಹೊಸ ವಿವಾದ ಆರಂಭವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರಿಶೀಲನೆ ಮಾಡಿದ್ದರು. ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ತನಿಖೆ ಮಾಡುವಂತೆ ಆದೇಶಿಸಿದ್ದರು.
ಇದೇ ಸಂದರ್ಭದಲ್ಲಿ ,ಶಿಲ್ಪಿ ಕೃಷ್ಣ ನಾಯ್ಕ್ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತನಗಾಗುತ್ತಿರುವ ದೌರ್ಜನ್ಯದ ಕುರಿತು ನೇರ ಹೇಳಿಕೆ ನೀಡಿದ್ದು ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.













