
ಛತ್ರಪತಿ ಸಂಭಾಜಿನಗರ: ಸಾಮಾಜಿಕ ಜಾಲತಾಣಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ವೇಗವಾಗಿ ಜನಪ್ರಿಯವಾಗುತ್ತಿರುವುದು ಅದರ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಪೋಷಕರಲ್ಲಿ ಆತಂಕ ಮೂಡಿಸಿದೆ.
ಸಿಜೆಪಿಗೆ ಹೆಚ್ಚುತ್ತಿರುವ ಬೆಂಬಲದ ಬಳಿಕ ಕಳೆದ ಎರಡು ದಿನಗಳಿಂದ ನೆಮ್ಮದಿಯ ನಿದ್ದೆಯೇ ಇಲ್ಲ ಎಂದು ಅಭಿಜಿತ್ ಅವರ ತಂದೆ ಭಗವಾನ್ ದೀಪ್ಕೆ ಮತ್ತು ತಾಯಿ ಅನಿತಾ ದೀಪ್ಕೆ ಹೇಳಿದ್ದಾರೆ.
ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಅಭಿಜಿತ್ ಭಾರತಕ್ಕೆ ಮರಳಿದಾಗ ಯಾವುದೇ ತೊಂದರೆ ಎದುರಾಗಬಹುದೇ ಎಂಬ ಭಯ ಕಾಡುತ್ತಿದೆ. ಬಂಧನದ ಆತಂಕವನ್ನು ಆತ ಕೂಡ ವ್ಯಕ್ತಪಡಿಸಿದ್ದಾನೆ ಎಂದು ಭಗವಾನ್ ದೀಪ್ಕೆ ತಿಳಿಸಿದ್ದಾರೆ.
ಸಿಜೆಪಿಯ ಬೆಳವಣಿಗೆ ಸಂತೋಷಕ್ಕಿಂತ ಚಿಂತೆಯನ್ನೇ ಹೆಚ್ಚಿಸಿದೆ. ರಾಜಕೀಯದಲ್ಲಿ ಆಸಕ್ತಿ ಇಲ್ಲದ ಕಾರಣ ಮಗನ ಭವಿಷ್ಯದ ಬಗ್ಗೆ ಕಳವಳವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ, ಅಭಿಜಿತ್ ರಾಜಕೀಯಕ್ಕಿಂತ ಉದ್ಯೋಗದತ್ತ ಗಮನ ಹರಿಸಬೇಕು ಎಂಬುದು ತಮ್ಮ ಆಶಯ. ರಾಜಕೀಯದಲ್ಲಿ ಮುಂದುವರಿಯುವ ನಿರ್ಧಾರಕ್ಕೆ ತಾವು ಬೆಂಬಲ ನೀಡುವುದಿಲ್ಲ ಎಂದು ತಾಯಿ ಅನಿತಾ ದೀಪ್ಕೆ ತಿಳಿಸಿದ್ದಾರೆ.




























