
ಕಣಜಾರು ರಂಗನಪಲ್ಕೆ ಮತ್ತು ಪಳ್ಳಿ ಬೆಳ್ಳೆ ಜನರಿಗೆ ಸರಕಾರಿ ಬಸ್ ಸೌಲಭ್ಯಕ್ಕೆ ಸೋಮವಾರ ಚಾಲನೆ ದೊರೆತಿದೆ.ನೀರೆ ಗ್ರಾ.ಪಂ.ವ್ಯಾಪ್ತಿಯ ಕಣಂಜಾರು ಗ್ರಾಮದಲ್ಲಿ ದಿನನಿತ್ಯ ವಿದ್ಯಾರ್ಥಿಗಳು ಸೆರಿದಂತೆ ನೂರಾರು ಮಂದಿ ಗ್ರಾಮದಿಂದ ಹೊರಭಾಗಕ್ಕೆ ತೆರಳುತ್ತಾರೆ. ಆದರೆ ಉಡುಪಿ-ಮೂಡುಬೆಳ್ಳೆ-ಪಳ್ಳಿ-ಕಣಂಜಾರು ಮತ್ತು ಬೈಲೂರು ಮಾರ್ಗವಾಗಿ ಕಾರ್ಕಳಕ್ಕೆ ಕೇವಲ ನಾಲ್ಕು ಖಾಸಗಿ ಬಸ್ ಎರಡು ಗಂಟೆಗೊಮ್ಮೆ ಸಂಚಾರ ಮಾಡುತ್ತಿದ್ದು, ವಿದ್ಯಾರ್ಥಿಗಳು ಸೇರಿದಂತೆ ಊರವರಿಗೆ ಬಾರೀ ತೊಂದರೆ ಯಾಗುತ್ತಿತ್ತು. ಇದೀಗ ನಿರಂತರ ಹೋರಾಟದ ಪ್ರಯತ್ನದಿಂದ ಸರಕಾರಿ ಬಸ್ ಸಂಚಾರಿಸಲು ಆರಂಭಗೊಂಡಿದೆ.
ದಿನಕ್ಕೆ ನಾಲ್ಕು ಟ್ರಿಪ್‌ನಂತೆ ಉಡುಪಿಯಿಂದ ಹೊರಡುವ ಈ ಬಸ್ ಹಿರಿಯಡ್ಕ ಮಾರ್ಗವಾಗಿ ಕಣಂಜಾರಿಗೆ, ಬೈಲೂರು ಮೂಲಕ ಕಾರ್ಕಳಕ್ಕೆ ಸಂಚರಿಸುತ್ತಿದೆ. ಈವರೆಗೆ ಸೀಮಿತ ಬಸ್‌ಗಳ ಸಂಚಾರದ ಪರಿಣಾಮ ವಿದ್ಯಾರ್ಥಿಗಳು ಬಸ್ ನಲ್ಲಿ ನೇತಾಡಿಕೊಂಡೇ ಸಾಗಬೇಕಿತ್ತು. ಆದ್ದರಿಂದ ಗ್ರಾಮದಲ್ಲಿ ಮತ್ತೊಂದು ಸರಕಾರಿ ಬಸ್ ಸಂಚಾರ ಆರಂಭ ಎಲ್ಲರಿಗೂ ಸಂತಸ ತಂದಿದೆ.
ಬೇಡಿಕೆ ಸಲ್ಲಿಸಿದ್ದರು:ನೀರೆ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಒಟ್ಟು 200 ವಿದ್ಯಾರ್ಥಿ ಗಳು ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಬೇಡಿಕೆ ಸಲ್ಲಿಸಿದ್ದರು. ಗ್ರಾ.ಪಂ.ಅಧ್ಯಕ್ಷ ಸಚ್ಚಿದಾನಂದ ಪ್ರಭು ಅವರು ಈ ಬಗ್ಗೆ ಪ್ರಯತ್ನ ನಡೆಸುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದರು. ಇದೀಗ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಹೋರಾಟಕ್ಕೆ ಮನ್ನಣೆ ಸಿಕ್ಕಿದೆ.



















