‘ಸಹಿಷ್ಣುತೆ, ಸಹಾನುಭೂತಿ ಎಲ್ಲಾ ಧರ್ಮಗಳ ಆಧಾರ’:ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ

ಮೂಡುಬಿದಿರೆ: ಮಾಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾ ಸ0ಸ್ಥೆಯಲ್ಲಿ ಗಾ0ಧಿ ಜಯ0ತಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಸರ್ವ ಧರ್ಮ ಅರಿವು ಕಾರ್ಯಕ್ರಮವನ್ನು ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು ಉದ್ಘಾಟಿಸಿ ಆಶೀರ್ವಚನವನ್ನು ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಧರ್ಮಗಳನ್ನು ಅರ್ಥ ಮಾಡಿಕೊಳ್ಳುವುದು ನಾಲ್ಕು ಅಂಧರು ಆನೆಯ ಯಾವುದೋ ಒಂದು ಭಾಗವನ್ನು ಸ್ಪರ್ಶಿಸಿ ಅನುಭವ ಪಡೆದುಕೊಡಂತೆ. ಪ್ರತಿಯೊಂದು ಧರ್ಮವು ತನ್ನದೇ ಆತ ತತ್ವವನ್ನು ಹೊಂದಿದೆ. ಆದರೆ ನಿಜವಾದ ಅರ್ಥಗ್ರಹಣ, ಎಲ್ಲಾ ದೃಷ್ಟಿಕೋನಗಳತ್ತ ತೆರೆದಾಗ ಮಾತ್ರ ಸಾಧ್ಯ. ಅಹಿಂಸೆ, ಸಹಾನುಭೂತಿ, ಸಹಿಷ್ಣುತೆ ಮತ್ತು ಸತ್ಯವೆಂಬುದು ಎಲ್ಲಾ ಧರ್ಮಗಳ ಅಧಾರವಾಗಿದೆ” ಎಂದರು. ದಯೆ ಮತ್ತು ಗೌರವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳುತ್ತಾ, “ಇತರರನ್ನು ನೋಯಿಸಬೇಡಿ. ನೀವು ಶಾತಿ ಮತ್ತು ಏಕತೆಯನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದ್ದಿರಿ. ನಿಮ್ಮ ಕ್ರಿಯೆಯು ನಿಮ್ಮ ಜೊತೆಯಲ್ಲಿರುವವರಿಗೆ ಯಾವುದೇ ರೀತಿಯ ಹಾನಿಯನ್ನು ಅಥವಾ ನೋವನ್ನುಂಟುಮಾಡಬಾರದು. ಸರ್ವೇ ಜನಾ: ಸುಖಿನೋ ಭವಂತು ಎಂಬ ತತ್ವದ ಮೇಲೆ ಬೆಳೆದು ಬಂದ ದೇಶ ನಮ್ಮದು. ಇತ್ತೀಚೆಗಿನ ದಿನಗಳಲ್ಲಿ ಧಾರ್ಮಿಕ ಸಮನ್ವಯತೆಯನ್ನು ಕಾಪಾಡುವುದು ಬಹಳ ಮುಖ್ಯವಾಗಿದೆ. ನಾವು ಎಲ್ಲಾ ಧರ್ಮಗಳನ್ನು ಗೌರವಿಸೋಣ”ಎಂದರು

ಇಸ್ಲಾಂ ಧರ್ಮದ ಅರಿವನ್ನು ಮೂಡಿಸಲು ಆಗಮಿಸಿದ್ದ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತರಾದ ರೆಹಾನಾ ಬೇಗಂ ಮಾತನಾಡುತ್ತಾ, “ಇಸ್ಲಾಮ್ ಎಂದರೆ ಶಾಂತಿ. ಕುರಾನ್ ಶಾಂತಿಯನ್ನು ಪ್ರತಿಪಾದಿಸುತ್ತದೆ. ನಮ್ಮ ಜೀವನವು ಅಮೂಲ್ಯವಾದದ್ದು. ದ್ವೇಷವು ಶಾಂತಿಯನ್ನು ಹಾಳು ಮಾಡುತ್ತದೆ. ನಾವು ನಮ್ಮ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುವತ್ತ ಪ್ರಯತ್ನಿಸಬೇಕು ಹಾಗೂ ಪ್ರೀತಿ ಎಲ್ಲಾ ಧರ್ಮಗಳ ಮೂಲ ತತ್ವವಾಗಿ ಉಳಿಯಬೇಕು. ಜಾತಿ ಧರ್ಮಗಳನ್ನು ಪರಿಗಣಿಸದೇ ವಿಷಸರ್ಪದ ಕಡಿತಕ್ಕೆ ಒಳಗಾದ ಸಾವಿರಾರು ಜನರ ಪ್ರಾಣವನ್ನು ಉಳಿಸುವ ಅವಕಾಶ ಆ ಭಗವಂತ ನನಗೆ ಒದಗಿಸಿಕೊಟ್ಟಿದ್ದಾನೆ. ನಾವ್ಯಾರೂ ದೇವರನ್ನು ನೋಡಿಲ್ಲ. ಆದರೆ ಪ್ರೀತಿ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ” ಎಂದರು.

ಕ್ರೈಸ್ತ ಧರ್ಮದ ಅರಿವನ್ನು ಮೂಡಿಸಲು ಆಗಮಿಸಿದ್ದ ಬಿ.ಇ.ಸಿ/ಎಸ್.ಸಿ.ಸಿ ಯ ನಿರ್ದೇಶಕರಾದ ವಂದನೀಯ ಗುರು ಸುನಿಲ್ ಜಾರ್ಜ್ ಡಿ’ಸೋಜಾ ಮಾತನಾಡುತ್ತಾ, “ಕ್ರೈಸ್ತ ಧರ್ಮವು ನಾವೆಲ್ಲರೂ ದೇವರ ಮಕ್ಕಳು ಎಂದು ಬೋಧಿಸುತ್ತದೆ. ಈ ತತ್ವದ ಆಧಾರದಲ್ಲಿ ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರುತ್ತೇವೆ. ಯೇಸು ಕೇವಲ ತನ್ನ ಧಾರ್ಮಿಕ ಹಿನ್ನಲೆಯನ್ನು ಹಂಚಿಕೊಳ್ಳುವವರ ಜೊತೆ ಮಾತ್ರವೇ ತನ್ನ ಪ್ರೀತಿಯನ್ನು ಹಂಚಿಕೊಂಡಿಲ್ಲ. ನಿಜವಾದ ಪ್ರೀತಿ ಮತ್ತು ಸಹಾನುಭೂತಿ ಧಾರ್ಮಿಕ ಮತ್ತು ಸಮಾಜಿಕ ಮೇರೆಗಳನ್ನು ಮೀರಿ ಹೋಗುತ್ತದೆ.” ಎಂದು ಹೇಳಿದರು. “ಇಂದಿನ ಧಾರ್ಮಿಕ ಅಸಹಿಷ್ಣುತೆ ಮತ್ತು ತಾರತಮ್ಯವನ್ನು ಪರಿಗಣಿಸಿದಾಗ ಪ್ರೀತಿ ಮತ್ತು ಸಹಾನುಭೂತಿ ಮತ್ತು ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಆಯ್ಕೆಯಲ್ಲ, ಜವಾಬ್ದಾರಿಯಾಗಿದೆ. ಸಹೋದರತ್ವವು ಕೇವಲ ಮಾತಿಗಷ್ಟೇ ಸೀಮಿತವಾಗಬಾರದು. ಅದು ಕ್ರಿಯೆಯಾಗಿ ಮೂಡಿಬರಬೇಕು” ಎಂದರು

ಹಿಂದೂ ಧರ್ಮ ಅರಿವನ್ನು ಮೂಡಿಸಲು ಆಗಮಿಸಿದ ಸಂಸ್ಕೃತಿ ಚಿಂತಕರಾದ ಪುತ್ತಿಗೆ ಬಾಲಕೃಷ್ಣ ಭಟ್ ಮಾತನಾಡುತ್ತಾ, “ಯಾವುದನ್ನು ಧರಿಸುತ್ತೇವೆ ಮತ್ತು ಪೋಷಿಸುತ್ತೇವೆಯೋ ಅದು ಧರ್ಮ. ಧರ್ಮವನ್ನು ನಾವು ರಕ್ಷಿಸಿದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ಅದೊಂದು ಜಾಗತಿಕ ನೈತಿಕತೆಯಾಗಿಪರಿವರ್ತಿಸಬಹುದು. ಮತ್ತು ವಿಶ್ವದಾದ್ಯಂತ ಎಲ್ಲರಿಗೂ ಅನ್ವಯವಾಗುತ್ತದೆ” ಎಂದರು.
“ಧರ್ಮವನ್ನು ಅರಿಯಲು ವೇದೋಪನಿಷತ್ತುಗಳಿವೆ, ತದನಂತರ ಸಂಸ್ಕೃತಿಗಳಿವೆ. ಇವುಗಳನ್ನು ಅಧ್ಯಯನ ಮಾಡಿದ ಮೇಲೆಯೂ ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿದರೆ ಮಹಾನ್ ವ್ಯಕ್ತಿಗಳ ಜೀವನವನ್ನು ಗಮನಿಸಿ ಅವರನ್ನು ಅನುಸರಿಸಬಹುದು. ಅದೂ ಕೂಡ ಕಷ್ಟವೆನಿಸಿದರೆ ಅಂತರಾತ್ಮದ ನಿರ್ದೇಶನದಂತೆ ನಡೆದುಕೊಳ್ಳಬಹುದು ಎಂದರು. ಎಲ್ಲಾ ಧರ್ಮಗಳ ಅಂತಿಮ ಗುರಿ ಆತ್ಮ ಸಾಕ್ಷಾತ್ಕಾರ. ಧರ್ಮ, ಅರ್ಥ, ಕಾಮವನ್ನು ಪೂರೈಸಿ ಎಲ್ಲಾ ಭೌತಿಕ ಗುರುತುಗಳಿಂದ ಕಳಚಿಕೊಳ್ಳುವುದೇ ಮೋಕ್ಷ” ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ ಜೈನ್ ಮಾತನಾಡಿ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸಿ ಎಂದು ಹೇಳಿಕೊಡುವುದೇ ಧರ್ಮ. ನಾವೆಲ್ಲರೂ ಬದುಕು ಮತ್ತು ಬದುಕಲು ಬಿಡು ಎಂಬ ತತ್ವದಲ್ಲಿ ಬದುಕಬೇಕಾಗಿದೆ. ಎಲ್ಲಾ ಧರ್ಮದ ಸಾರ ಮನುಷ್ಯ ಧರ್ಮವೇ ಆಗಿದೆ. ಎಲ್ಲರೂ ಸಮಾನತೆಯಿಂದ,ಶಾತಿ ಸಹಬಾಳ್ವೆಯಿಂದ ಒಟ್ಟಾಗಿ ಬಾಳಿ ಬದುಕಿ ಭವ್ಯ ಭಾರತ ಧರ್ಮವನ್ನು ರಕ್ಷಿಸೋಣ ಎಂದರು.
ಸಂಸ್ಥೆಯ ಆಡಳಿತ ನಿರ್ದೇಶಕ ಡಾ ಸಂಪತ್ ಕುಮಾರ್ ಉಜಿರೆ, ಪ್ರಾಂಶುಪಾಲರಾ್ ಪ್ರದೀಪ್ ಕುಮಾರ್ ಶೆಟ್ಟಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್, ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲ ಸುರೇಶ್ ಉಪಸ್ಥಿತರಿದ್ದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಹರೀಶ್ ಎಂ ವಂದಿಸಿದರು. ಡಾ ವಾದಿರಾಜ ಕಾರ್ಯಕ್ರಮ ನಿರೂಪಿಸಿದರು













