
ನವದೆಹಲಿ: ಏಪ್ರಿಲ್ 29ರಂದು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಳ್ಳಲಿರುವ ಹಿನ್ನೆಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ. ಇಂತಹ ಯಾವುದೇ ನಿರ್ಧಾರ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದೆ.
ಪಶ್ಚಿಮ ಬಂಗಾಳದ ಮತದಾನ ಮುಗಿಯುತ್ತಿದ್ದಂತೆ ಇಂಧನ ಬೆಲೆ ಹೆಚ್ಚಳವಾಗುತ್ತದೆ ಎಂಬ ಮಾತುಗಳನ್ನು ಸರ್ಕಾರ ತಳ್ಳಿಹಾಕಿದೆ. ಜಾಗತಿಕ ತೈಲ ಮಾರುಕಟ್ಟೆಯ ಸ್ಥಿತಿ ಮತ್ತು ತೈಲ ಕಂಪನಿಗಳ ನಷ್ಟದ ನಡುವೆಯೂ ಬೆಲೆ ಏರಿಕೆಗೆ ಪ್ರಸ್ತಾವನೆ ಇಲ್ಲ ಎಂದು ಹೇಳಿದೆ.
ವದಂತಿಗಳ ಪರಿಣಾಮವಾಗಿ ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ಸಾರ್ವಜನಿಕರು ಭಯದಿಂದ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಖರೀದಿಸಲು ಮುಗಿಬಿದ್ದಿದ್ದಾರೆ. ಇದರಿಂದ 400ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಕೊರತೆ ಉಂಟಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ “ಎಲ್ಲಾ ಪಂಪ್ಗಳಿಗೆ ಸರಬರಾಜು ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಪೆಟ್ರೋಲ್, ಡೀಸೆಲ್, ಎಲ್ಪಿಜಿ ಮತ್ತು ಎಟಿಎಫ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ” ಎಂದು ತಿಳಿಸಿದ್ದಾರೆ.



















