
ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದ್ದು ಅದೇನಂದರೆ ಈ ವರ್ಷದ ಸ್ವಾತಂತ್ರೋತ್ಸವದ ದಿನದಂದು ಹೆದ್ದಾರಿ ಪ್ರಯಾಣಿಕರಿಗೆ ಟೋಲ್ ಸ್ವಾತಂತ್ರ್ಯ ಕಲ್ಪಿಸುವ ಉದ್ದೇಶದಿಂದ ಫಾಸ್ಟಾಗ್ ವಾರ್ಷಿಕ ಪಾಸ್ ಪರಿಚಯಿಸುತ್ತಿದ್ದಾರೆ.
ದುಬಾರಿ ಟೋಲ್ ಶುಲ್ಕದ ಬಗ್ಗೆ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ದೀರ್ಘಕಾಲದ ಕಳವಳಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಾರ್ಷಿಕ ಟೋಲ್ ಪಾಸ್ ಅನ್ನು ಘೋಷಿಸಿದ್ದು ವೈಯುಕ್ತಿಕ ಪ್ರಯಾಣಿಕ ವಾಹನಗಳಿಗೆ ಪದೇ ಪದೇ ಟೋಲ್ ಕಡಿತಗಳನ್ನು ತೆಗೆದುಹಾಕುವ ಉದ್ದೇಶ ಇದರ ಹಿಂದಿದೆ.
200 ಟ್ರಿಪ್ ಗಳಿಗೆ ಅನ್ವಯಿಸಿ 3,000 ಬೆಲೆಯ ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದು ಈ ಪಾಸ್ ಅನ್ನು ಕಾರು, ಜೀಪ್, ಮತ್ತು ವ್ಯಾನ್ ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ರೂಪಿಸಲಾಗಿದೆ.
ಟೋಲ್ ನಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುವುದು, ಟೋಲ್ ಪ್ಲಾಜಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು, ಮತ್ತು ದೇಶದ ಲಕ್ಷಾಂತರ ಖಾಸಗಿ ವಾಹನ ಮಾಲಕರಿಗೆ ವೇಗವಾದ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವ ಗುರಿಯನ್ನು ಇದು ಹೊಂದಿದೆ. ಈ ಪಾಸ್ ರಾಷ್ಟ್ರೀಯ ಹೆದ್ದಾರಿ ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್ ವೇ ಟೋಲ್ ಪ್ಲಾಜಾ ಗಳಲ್ಲಿ ಮಾತ್ರ ಮಾನ್ಯವಾಗಿದ್ದು ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಎಕ್ಸ್ಪ್ರೆಸ್ ವೇ ಗಳು, ರಾಜ್ಯ ಹೆದ್ದಾರಿಗಳಲ್ಲಿ ಈ ವಾರ್ಷಿಕ ಪಾಸ್ ಅನ್ವಯಿಸುವುದಿಲ್ಲ.
ಈ ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ರಾಷ್ಟ್ರೀಯ ಹೆದ್ದಾರಿ ಟ್ರಿಪ್ ಕ್ರಮಿಸುವವರೆಗೆ ಮಾತ್ರ ಇದು ಮಾನ್ಯವಾಗಿದ್ದು ಇದು ರಾಜಮಾರ್ಗ ಯಾತ್ರೆ ಮೊಬೈಲ್ ಅಪ್ಲಿಕೇಶನ್ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವೆಬ್ಸೈಟ್ನಲ್ಲಿ ಮಾತ್ರ ಲಭ್ಯವಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸೌಲಭ್ಯಕ್ಕಾಗಿ ಮೀಸಲಾದ ಲಿಂಕನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.
ದೇಶದ ಯಾವುದೇ ರಾಷ್ಟ್ರೀಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಎಕ್ಸ್ಪ್ರೆಸ್ ಗಳಲ್ಲಿ ಒಂದು ಟೋಲ್ ಶುಲ್ಕ ಪ್ಲಾಜಾ ದಾಟುವುದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಿದ್ದು ಒಂದು ಸುತ್ತಿನ (ಹೋಗಿ ಬರುವುದು)ಪ್ರಯಾಣವನ್ನು ಎರಡು ಟ್ರಿಪ್ ಎಂದು ಪರಿಗಣಿಸಲಾಗುತ್ತದೆ. ಒಂದು ವರ್ಷಕ್ಕಿಂತ ಮೊದಲೇ ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ನ 200 ಟ್ರಿಪ್ ಮುಗಿದರೆ ಮತ್ತೆ ಹೊಸದಾಗಿ ವಾರ್ಷಿಕ ಪಾಸ್ ನವೀಕರಿಸಬಹುದು.
ಫಾಸ್ಟಾಗ್ ವಾರ್ಷಿಕ ಪಾಸನ್ನು ಸಕ್ರಿಯಗೊಳಿಸಲು ವಾಹನದ ಅರ್ಹತೆ ಮತ್ತು ಸಂಬಂಧಿತ ಫಾಸ್ಟ್ ಟ್ಯಾಗ್ನ ಅರ್ಹತೆಯ ಪರಿಶೀಲನ ಪ್ರಕ್ರಿಯೆ ಯಶಸ್ವಿಯಾದ ಬಳಿಕ ಬಳಕೆದಾರರು ರಾಜಮಾರ್ಗ ಯಾತ್ರೆ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಮೂಲಕ 3,000 ಪಾವತಿ ಮಾಡಿದ ಬಳಿಕ ಫಾಸ್ಟಾಗ್ನಲ್ಲಿ ವಾರ್ಷಿಕ ಪಾಸ್ ಅನ್ನು ಸಕ್ರಿಯಗೊಳಿಸಲಾಗುತ್ತದೆ.













