
ಬೆಂಗಳೂರು: ವೈದ್ಯೆಯಾಗಿರುವ ಮಗಳ ಬದುಕು ಸುಂದರವಾಗಿರಲಿ ಎಂದು ಅದೆಷ್ಟೋ ಕನಸುಗಳನ್ನು ಕಟ್ಟಿ ಪೋಷಕರು ವೈದ್ಯನಿಗೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದು ಆದರೆ ಪತ್ನಿಯನ್ನು ಅನಸ್ತೇಷಿಯಾ ಇಂಜೆಕ್ಷನ್ ಕೊಟ್ಟು ಕಿಲ್ಲರ್ ಡಾಕ್ಟರ್ ಮರ್ಡರ್ ಮಾಡಿರುವುದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.
ವೈದ್ಯಕೀಯ ವಿದ್ಯೆ ಬಳಸಿ ಕೊಲೆಗಾರ ಡಾ. ಮಹೇಂದ್ರ ರೆಡ್ಡಿ ಮುದ್ದಾಗಿದ್ದ ಮಡದಿ ಡಾ. ಕೃತಿಕಾ ರೆಡ್ಡಿಯ ಉಸಿರು ನಿಲ್ಲಿಸಿದ್ದಾನೆ. ಇದೀಗ ಬಗೆದಷ್ಟು ಒಂದೊಂದೇ ವಿಚಾರಗಳು ಬಯಲಾಗುತ್ತಿದೆ. ವೈದ್ಯನಾಗಿದ್ದ ಪತಿ, ವೈದ್ಯೆ ಪತ್ನಿಯನ್ನ ಕೊಂದ ಪ್ರಕರಣದಲ್ಲಿ ಟ್ವಿಸ್ಟ್ಗಳು ಸಿಗುತ್ತಿವೆ.
ಕೊಲೆಗಾರ ಡಾ. ಮಹೇಂದ್ರ ರೆಡ್ಡಿ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪಗಳು ಕೇಳಿಬಂದಿದ್ದು ಪ್ರೇಯಸಿಗೋಸ್ಕರ ಪತ್ನಿ ಕೃತಿಕಾ ರೆಡ್ಡಿಯನ್ನ ಕೊಲೆ ಮಾಡಿದ್ದಾನೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ, ವೃತ್ತಿಯಲ್ಲಿ ವೈದ್ಯನಾಗಿರುವ ಆತ, ಬೇರೆ-ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಶಂಕಿಸಿದ್ದು, ಇದೇ ಕಾರಣಕ್ಕೆ ಕೃತಿಕಾಳನ್ನ ಹತ್ಯೆಗೈದಿದ್ದಾರೆನೆ ಎಂದು ಆಕೆಯ ತಂದೆ ಮುನಿರೆಡ್ಡಿ ಆರೋಪಿಸಿದ್ದಾರೆ.
ಮಹೇಂದ್ರ ರೆಡ್ಡಿ ಡಾ.ಕೃತಿಕಾ ಕೊಲೆ ಮಾಡುವುದಕ್ಕೆ ಅನಸ್ತೇಷಿಯಾ ಬಳಕೆ ಮಾಡಿರುವುದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದ್ದು ಆರೋಪಿ ಮಹೇಂದ್ರ, ತಾನು ಕೆಲಸ ಮಾಡುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಮಡಿವಾಳದಲ್ಲಿರುವ ಆತನ ಸಹೋದರನ ಮೆಡಿಕಲ್ ಶಾಪ್ನಲ್ಲಿ ಅನಸ್ತೇಷಿಯಾ ಖರೀದಿ ಮಾಡಿದ್ದಾನೆಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದು ಇತ್ತ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಇರುವ ಗ್ಯಾಸ್ಟ್ರೋ ಎಂಟ್ರಾಲಜಿ ಸಂಸ್ಥೆ, ಜುಲೈನಲ್ಲಿಯೇ ಆರೋಪಿ ಮಹೇಂದ್ರ ಕೆಲಸ ಬಿಟ್ಟಿದ್ದಾನೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.











