
ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (UGCET-2026) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಅಧಿಕೃತವಾಗಿ ಪ್ರಕಟಿಸಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದರು.
ಮಧ್ಯಾಹ್ನ 2 ಗಂಟೆಯ ಬಳಿಕ ವಿದ್ಯಾರ್ಥಿಗಳು ತಮ್ಮ ರ‍್ಯಾಂಕ್ ಹಾಗೂ ಅಂಕಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ವೆಬ್‌ಸೈಟ್‌ನಲ್ಲಿ ಹೆಚ್ಚಿನ ಒತ್ತಡ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಇಎ ಹಲವು ಅಧಿಕೃತ ಲಿಂಕ್‌ಗಳನ್ನು ಒದಗಿಸಿದೆ. ಅಭ್ಯರ್ಥಿಗಳು cetonline.karnataka.gov.in/kea, karresults.nic.in ಹಾಗೂ keaonline.karnataka.gov.in ಮೂಲಕ ಫಲಿತಾಂಶ ವೀಕ್ಷಿಸಬಹುದು.
ಫಲಿತಾಂಶ ನೋಡಲು ನೋಂದಣಿ ಸಂಖ್ಯೆ ಹಾಗೂ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಿ ‘Submit’ ಕ್ಲಿಕ್ ಮಾಡಬೇಕು. ಮುಂದಿನ ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಗೆ ಸ್ಕೋರ್‌ಕಾರ್ಡ್ ಅಗತ್ಯವಾಗಿರುವುದರಿಂದ ಅದನ್ನು ಡೌನ್‌ಲೋಡ್ ಮಾಡಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ.
ಸರ್ವರ್ ನಿಧಾನಗೊಂಡರೂ ಆತಂಕಪಡಬಾರದು. ಸ್ವಲ್ಪ ಸಮಯದ ಬಳಿಕ ಅಥವಾ ಪರ್ಯಾಯ ಲಿಂಕ್‌ಗಳ ಮೂಲಕ ಮತ್ತೊಮ್ಮೆ ಪ್ರಯತ್ನಿಸುವಂತೆ ಕೆಇಎ ವಿದ್ಯಾರ್ಥಿಗಳಿಗೆ ಮನವಿ ಮಾಡಿದೆ.
































