
ಉಡುಪಿ: ದೇವಸ್ಥಾನಗಳ ಹುಂಡಿ ಹಣದ ಸಂಗ್ರಹ ಹಾಗೂ ಎಣಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಿನ ಕ್ರಮಗಳು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿವೆ. ಉಡುಪಿ ಜಿಲ್ಲೆಯ ಎ ಮತ್ತು ಬಿ ದರ್ಜೆಯ 43 ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಪೂರ್ಣಗೊಂಡಿದ್ದು, ಈ ವಾರದಿಂದ ಹುಂಡಿ ಎಣಿಕೆ ಪ್ರಕ್ರಿಯೆ ಲೈವ್ ಮಾನಿಟರಿಂಗ್ಗೆ ಒಳಪಡಲಿದೆ.
ಹುಂಡಿ ತೆರೆಯುವಿಕೆ, ಹಣ ಎಣಿಕೆ, ಸಂಗ್ರಹ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ಸಿಸಿ ಕ್ಯಾಮರಾಗಳ ಮೂಲಕ ದಾಖಲಿಸಲಾಗುತ್ತದೆ. ದೇವಸ್ಥಾನಗಳ ಕಾಣಿಕೆ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಭದ್ರತೆ ಹೆಚ್ಚಿಸಲು ಸರ್ಕಾರ ಈ ವ್ಯವಸ್ಥೆ ಜಾರಿಗೆ ತಂದಿದೆ.
ಡಿಸಿ ಕಚೇರಿಯಿಂದಲೇ ನಿಗಾ
ದೇವಸ್ಥಾನಗಳ ಸಿಸಿ ಕ್ಯಾಮರಾ ದೃಶ್ಯಗಳ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಮುಜರಾಯಿ ಇಲಾಖೆ ಕಚೇರಿಯಲ್ಲಿ ಲೈವ್ ಮಾನಿಟರಿಂಗ್ ವ್ಯವಸ್ಥೆ ಸಿದ್ಧಪಡಿಸಲಾಗಿದೆ. ಇದರಿಂದ ಹುಂಡಿ ಎಣಿಕೆ ಕಾರ್ಯವನ್ನು ಜಿಲ್ಲಾ ಮಟ್ಟದಿಂದಲೇ ವೀಕ್ಷಿಸಲು ಸಾಧ್ಯವಾಗಲಿದೆ.
ಕೊಲ್ಲೂರಿನಿಂದ ಮೊದಲ ಲೈವ್ ಪ್ರಸಾರ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಈ ವಾರ ನಡೆಯಲಿರುವ ಹುಂಡಿ ಎಣಿಕೆ ಕಾರ್ಯದಿಂದಲೇ ಲೈವ್ ಸ್ಟ್ರೀಮಿಂಗ್ ಆರಂಭವಾಗಲಿದೆ ಎಂದು ಮುಜರಾಯಿ ಇಲಾಖೆಯ ತಹಶೀಲ್ದಾರ್ ಐ.ಎಚ್. ತುಂಬಗಿ ತಿಳಿಸಿದ್ದಾರೆ.
ಭಕ್ತರು ಹುಂಡಿಗೆ ಹಣ, ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ಕಾಣಿಕೆಗಳನ್ನು ಸಲ್ಲಿಸುತ್ತಾರೆ. ಇವುಗಳ ನಿರ್ವಹಣೆಯಲ್ಲಿ ಅಕ್ರಮ ಅಥವಾ ಲೆಕ್ಕಪತ್ರದ ಗೊಂದಲಕ್ಕೆ ಅವಕಾಶವಾಗದಂತೆ ಹೊಸ ಪ್ರಮಾಣಿತ ಕಾರ್ಯವಿಧಾನ ಜಾರಿಗೊಳಿಸಲಾಗಿದೆ.
ಹೊಸ ವ್ಯವಸ್ಥೆಯಡಿ ಹುಂಡಿ ಎಣಿಕೆ ವೇಳೆ ಕಂದಾಯ ಅಧಿಕಾರಿಗಳ ಉಪಸ್ಥಿತಿ, ತಹಶೀಲ್ದಾರ್ ಮೇಲ್ವಿಚಾರಣೆ ಹಾಗೂ ವಿಡಿಯೋ ದಾಖಲೀಕರಣ ಕಡ್ಡಾಯವಾಗಿದ್ದು, ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರ ಮೇಲೂ ನಿಗಾ ಇರಲಿದೆ.































































































































