
ಬೆಂಗಳೂರು: ರಾಜ್ಯದಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಪ್ರಕ್ರಿಯೆಗೆ ನಿಯಂತ್ರಣ ತರಲು ಸರ್ಕಾರ ಮುಂದಾಗಿದೆ. ಟ್ಯಾಟೂ ಹಾಕುವ ವೇಳೆ ಸ್ವಚ್ಛತೆ ಕಾಪಾಡದಿರುವುದು ಹಾಗೂ ಗುಣಮಟ್ಟವಿಲ್ಲದ ಇಂಕ್ ಮತ್ತು ಕೆಮಿಕಲ್‌ಗಳ ಬಳಕೆಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ದೇಶದಲ್ಲಿ ಟ್ಯಾಟೂಗೆ ಸಂಬಂಧಿಸಿದಂತೆ ಸಮಗ್ರ ನಿಯಂತ್ರಣ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಕೂಡ ಈ ಕುರಿತು ತಜ್ಞರ ಸಮಿತಿ ರಚಿಸಿದ್ದು, ಸುರಕ್ಷತಾ ಮಾನದಂಡಗಳನ್ನು ರೂಪಿಸುವ ಪ್ರಕ್ರಿಯೆ ಆರಂಭಿಸಿದೆ.
ಟ್ಯಾಟೂ ಹಾಕುವಾಗ ಬಳಸುವ ಸೂಜಿ ಮತ್ತು ಸಾಧನಗಳನ್ನು ಸರಿಯಾಗಿ ಸ್ಟೆರಿಲೈಸ್ ಮಾಡದೇ ಬಳಸುವುದರಿಂದ HIV, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಸೇರಿದಂತೆ ವಿವಿಧ ಸೋಂಕುಗಳು ಹರಡುವ ಸಾಧ್ಯತೆ ಇದೆ. ಅಲ್ಲದೆ, ಕೆಲವು ಇಂಕ್‌ಗಳು ಹಾಗೂ ರಾಸಾಯನಿಕಗಳಿಂದ ಚರ್ಮದ ಸಮಸ್ಯೆಗಳು ಉಂಟಾಗುವ ಅಪಾಯವೂ ಇದೆ.
ಟ್ಯಾಟೂ ಪಾರ್ಲರ್‌ಗಳಿಗೆ ಪರವಾನಗಿ ಕಡ್ಡಾಯ, ನಿಯಮಿತ ತಪಾಸಣೆ, ಸಾಧನಗಳ ಸ್ವಚ್ಛತೆ ಹಾಗೂ ಇಂಕ್‌ಗಳ ಗುಣಮಟ್ಟದ ಮೇಲ್ವಿಚಾರಣೆ ಸೇರಿದಂತೆ ಹಲವು ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದೆ. ಟ್ಯಾಟೂ ಆರ್ಟಿಸ್ಟ್‌ಗಳ ಅರ್ಹತೆ ಮತ್ತು ತರಬೇತಿಯ ಬಗ್ಗೆಯೂ ಮಾರ್ಗಸೂಚಿ ರೂಪಿಸುವ ಸಾಧ್ಯತೆಯಿದೆ.
ಯುವಜನರಲ್ಲಿ ಟ್ಯಾಟೂ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ, ಸರಿಯಾದ ಸ್ವಚ್ಛತೆ ಪಾಲಿಸುವ, ಅನುಮೋದಿತ ಇಂಕ್ ಬಳಸುವ ಸ್ಥಳಗಳಲ್ಲಿ ಮಾತ್ರ ಟ್ಯಾಟೂ ಹಾಕಿಸಿಕೊಳ್ಳುವುದು ಸುರಕ್ಷಿತ. ಅನುಭವವಿಲ್ಲದವರಿಂದ ಅಥವಾ ಅನಧಿಕೃತ ಸ್ಥಳಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಧಕ್ಕೆಯಾಗಬಹುದು.




























































