
ನೆಲಮಂಗಲ: 31 ವರ್ಷದ ಟೆಕ್ಕಿ ಅದ್ವೈತ್ ಉಪಾಧ್ಯಾಯ ನಾಪತ್ತೆಯಾಗಿ ಐದನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಶುಕ್ರವಾರ ಬೆಳಗ್ಗೆ ಶಿವಗಂಗೆ ಬೆಟ್ಟಕ್ಕೆ ಒಂಟಿಯಾಗಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅರಣ್ಯ ಇಲಾಖೆ ಹಾಗೂ ಪೊಲೀಸರು ಸೇರಿದಂತೆ ಸುಮಾರು 100 ಸಿಬ್ಬಂದಿ ಬೆಟ್ಟದ ಅಪಾಯಕಾರಿ ಪ್ರದೇಶಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಈ ನಡುವೆ ಶೋಧ ಕಾರ್ಯಾಚರಣೆಗೆ ಮಹತ್ವದ ಸುಳಿವು ಸಿಕ್ಕಿದೆ. ಶಿವಗಂಗೆ ಬೆಟ್ಟದ ಅತ್ಯಂತ ಕಡಿದಾದ ಪ್ರದೇಶವಾದ ಶಾಂತಲಾ ಡ್ರಾಪ್‌ನ ತಳಭಾಗದ ದಟ್ಟ ಕಾಡಿನಲ್ಲಿ ದೇಹದಂತೆ ಕಾಣುವ ವಸ್ತುವೊಂದು ಡ್ರೋನ್ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಆದರೆ ಸ್ಥಳದಲ್ಲಿ ನಿರಂತರ ಮಳೆ ಹಾಗೂ ಜಾರು ಬಂಡೆಗಳಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಅಲ್ಲಿಗೆ ತಲುಪಲು ಸಾಧ್ಯವಾಗಿಲ್ಲ.
ಅದ್ವೈತ್ ಕಾಡುಗೋಡಿಯಲ್ಲಿ ವಾಸಿಸುತ್ತಿದ್ದು, ಐಐಟಿ ಪದವೀಧರರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಬಾಡಿಗೆ ಮೋಟಾರ್‌ಸೈಕಲ್‌ನಲ್ಲಿ ಶಿವಗಂಗೆಗೆ ತೆರಳಿದ್ದರು. ಬೆಟ್ಟದ ತಪ್ಪಲಿನಲ್ಲಿ ಅವರ ಬೈಕ್ ಪತ್ತೆಯಾಗಿದ್ದು, ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿತ್ತು. ಅವರ ಕೊನೆಯ ಮೊಬೈಲ್ ಸ್ಥಳ ಸಾಮಾನ್ಯ ಟ್ರೆಕ್ಕಿಂಗ್ ಮಾರ್ಗದಿಂದ ದೂರದಲ್ಲಿ ಪತ್ತೆಯಾಗಿತ್ತು.
ಬೆಟ್ಟದ ತಪ್ಪಲಿನ ಸಿಸಿಟಿವಿ ದೃಶ್ಯಗಳಲ್ಲಿ ಬೆಳಗ್ಗೆ 7.30ರ ಸುಮಾರಿಗೆ ಬೈಕ್ ನಿಲ್ಲಿಸಿ ಅದ್ವೈತ್ ಬೆಟ್ಟದತ್ತ ತೆರಳಿರುವುದು ಕಂಡುಬಂದಿದೆ. ಬಳಿಕ ಬೆಟ್ಟದ ಮೇಲಿನಿಂದ ತಮ್ಮ ನಿಶ್ಚಿತಾರ್ಥದ ಪತ್ನಿ ಪ್ರಾಪ್ತಿ ಚೌಹಾಣ್‌ಗೆ ಸೆಲ್ಫಿ ಕಳುಹಿಸಿದ್ದರು ಎನ್ನಲಾಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿತ್ತು.
ಇದೀಗ ಡ್ರೋನ್‌ನಲ್ಲಿ ಕಂಡುಬಂದಿರುವ ದೇಹದಂತಿರುವ ವಸ್ತುವೇ ಅದ್ವೈತ್ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಮಳೆ ಹಾಗೂ ಭೂಪ್ರದೇಶದ ಅಪಾಯ ಕಡಿಮೆಯಾದ ಬಳಿಕ ರಕ್ಷಣಾ ತಂಡಗಳು ಶಾಂತಲಾ ಡ್ರಾಪ್ ತಳಕ್ಕೆ ಇಳಿಯಲು ಪ್ರಯತ್ನಿಸಲಿವೆ.
ಈ ನಡುವೆ ಪೊಲೀಸರ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಬಹಿರಂಗವಾಗಿದೆ. ಅದ್ವೈತ್ ಶೀಘ್ರದಲ್ಲೇ ಇಂದೋರ್‌ಗೆ ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಕಾಡುಗೋಡಿಯ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಅವರ ಲ್ಯಾಪ್‌ಟಾಪ್ ಪೊಲೀಸರಿಗೆ ಸಿಕ್ಕಿದ್ದು, ಅದರ ಪರಿಶೀಲನೆಯಲ್ಲಿ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ.
ಅದ್ವೈತ್ ಅವರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೂಲಕ ಶಾಂತಲಾ ಡ್ರಾಪ್‌ನಿಂದ ಬಿದ್ದರೆ ಎಷ್ಟು ಸಮಯದಲ್ಲಿ ಸಾವು ಸಂಭವಿಸಬಹುದು ಎಂಬ ಮಾಹಿತಿ ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತ್ಮಹತ್ಯೆಯ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

























































