ಬದುಕಿನ ನಿತ್ಯದ ಬಂಧುಗಳೊಂದಿಗೆ ಸಂತಸ ಹಂಚಿಕೊಂಡ … ಶಾಸಕ ವಿ.ಸುನಿಲ್ ಕುಮಾರ್

ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರ ಹುಟ್ಟುಹಬ್ಬ ಈ ಬಾರಿ ವಿಭಿನ್ನ ರೀತಿಯಲ್ಲಿ ಆಚರಿಸಲ್ಪಟ್ಟು, ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು.

ಕುಟುಂಬದ ಆಪ್ತ ಬಂಧುಗಳು ಹಾಗೂ ತಮ್ಮ ಕುಟುಂಬದ ದೈನಂದಿನ ಬದುಕಿನೊಂದಿಗೆ ನೇರವಾಗಿ ಬೆಸೆದುಕೊಂಡಿರುವ ವಿವಿಧ ಕ್ಷೇತ್ರಗಳ ಆತ್ಮೀಯರೊಂದಿಗೆ ಶಾಸಕ ಸುನಿಲ್ ಕುಮಾರ್ ಅವರು ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ಮನೆಯ ದಿನಸಿ ಸಾಮಗ್ರಿಗಳನ್ನು ಒದಗಿಸುವ ಹಿರಿಯರಾದ ದೇವಣ್ಣ, ಕುಟುಂಬದ ಆರೋಗ್ಯದ ಕಾಳಜಿ ವಹಿಸುವ ವೈದ್ಯರಾದ ಡಾ. ಕಾರ್ತಿಕ್ ರಾವ್ ಹಾಗೂ ಡಾ. ಮೃಣಾಲ್, ಕಚೇರಿ ಸಿಬ್ಬಂದಿಗಳು ಮತ್ತು ಸಹಾಯಕರು ಸೇರಿದಂತೆ ಪ್ರತಿನಿತ್ಯದ ಬದುಕಿನಲ್ಲಿ ಕುಟುಂಬದೊಂದಿಗೆ ಒಡನಾಟ ಹೊಂದಿರುವವರನ್ನು ಈ ಸಂಭ್ರಮದಲ್ಲಿ ಒಳಗೊಳ್ಳಲಾಯಿತು.
ಅದೇ ರೀತಿ ಪ್ರತಿದಿನ ಮನೆಗೆ ಹಾಲು ಮತ್ತು ಪತ್ರಿಕೆ ತಲುಪಿಸುವವರು, ಮೀನು-ಮಾಂಸ, ತರಕಾರಿ, ಹೂವು-ಹಣ್ಣುಗಳನ್ನು ಒದಗಿಸುವವರು, ಮಗನ ಟ್ಯೂಷನ್ ಶಿಕ್ಷಕರು, ತುರ್ತು ಪ್ರಯಾಣಕ್ಕೆ ಸಹಕರಿಸುವ ಆಟೋ ರಿಕ್ಷಾ ಚಾಲಕರು, ಸ್ವಚ್ಛತೆಯನ್ನು ಕಾಪಾಡುವ ಕಸ ಸಂಗ್ರಹಕಾರರು, ಎಲೆಕ್ಟ್ರೀಷಿಯನ್, ಸುಂದರವಾದ ವಸ್ತ್ರಗಳನ್ನು ಸಿದ್ಧಪಡಿಸುವ ಟೈಲರ್ ಹಾಗೂ ಬಟ್ಟೆಗಳನ್ನು ಅಚ್ಚುಕಟ್ಟಾಗಿಸುವ ಐರನ್ ಮಾಡುವವರು ಸೇರಿದಂತೆ ದಿನನಿತ್ಯದ ಬದುಕಿನಲ್ಲಿ ಜೊತೆಯಾಗಿರುವ ಆತ್ಮೀಯರೊಂದಿಗೆ ಹುಟ್ಟುಹಬ್ಬದ ಸಂತೋಷವನ್ನು ಹಂಚಿಕೊಳ್ಳಲಾಯಿತು.
ಈ ಸಂದರ್ಭವನ್ನು ಸ್ಮರಿಸಿಕೊಂಡಿರುವ ಶಾಸಕ ಸುನಿಲ್ ಕುಮಾರ್ ಅವರು, “ನಮ್ಮ ಬದುಕನ್ನು ಸುಂದರವಾಗಿಸುವುದು ದೊಡ್ಡ ದೊಡ್ಡ ಸಂಬಂಧಗಳಷ್ಟೇ ಅಲ್ಲ. ಪ್ರತಿನಿತ್ಯದ ಬದುಕಿನಲ್ಲಿ ಹೀಗೆ ಬೆಸೆದುಕೊಳ್ಳುವ ಸಣ್ಣ ಸಣ್ಣ ಆತ್ಮೀಯತೆಗಳೇ ನಿಜವಾದ ಬಾಂಧವ್ಯಗಳು” ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮಕ್ಕಿಂತಲೂ ಪ್ರತಿನಿತ್ಯ ತಮ್ಮ ಹಾಗೂ ತಮ್ಮ ಕುಟುಂಬದೊಂದಿಗೆ ಜೊತೆಯಾಗಿ ನಿಂತಿರುವವರೊಂದಿಗೆ ಕೆಲಕಾಲ ಆತ್ಮೀಯವಾಗಿ ಕುಶಲೋಪರಿ ಮಾತನಾಡಿ, ಸಹಭೋಜನದ ಮೂಲಕ ಸಂತೋಷವನ್ನು ಹಂಚಿಕೊಂಡ ಕ್ಷಣವೇ ಈ ಬಾರಿಯ ಹುಟ್ಟುಹಬ್ಬದ ನಿಜವಾದ ವಿಶೇಷತೆ ಎಂದು ಅವರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಗಣ್ಯರ ಹುಟ್ಟುಹಬ್ಬಗಳು ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತವೆ. ಆದರೆ, ತಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವವರನ್ನು ಗುರುತಿಸಿ ಅವರೊಂದಿಗೆ ಹುಟ್ಟುಹಬ್ಬದ ಸಂತೋಷ ಹಂಚಿಕೊಂಡಿರುವ ಸುನಿಲ್ ಕುಮಾರ್ ಅವರ ಈ ಆಚರಣೆ ಮಾನವೀಯತೆ ಮತ್ತು ಆತ್ಮೀಯ ಸಂಬಂಧಗಳಿಗೆ ಮಹತ್ವ ನೀಡಿದ ವಿಭಿನ್ನ ಹೆಜ್ಜೆಯಾಗಿ ಗಮನ ಸೆಳೆಯಿತು.




































































































