
ತಿರುವನಂತಪುರಂ: ಶಬರಿಮಲೆಯಲ್ಲಿ ಪಡಿಪೂಜೆ ಬುಕಿಂಗ್‌ಗೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ದಿನಕ್ಕೆ ಐದು ಪಡಿಪೂಜೆಗಳನ್ನು ನಡೆಸಲು ತೀರ್ಮಾನಿಸಿದ್ದು, ಈ ಕುರಿತು ಕೇರಳ ಹೈಕೋರ್ಟ್‌ನ ದೇವಸ್ವಂ ಪೀಠಕ್ಕೆ ಮಾಹಿತಿ ನೀಡಿದೆ. ಈಗಾಗಲೇ ಬುಕ್ ಆಗಿರುವ ಪೂಜೆಗಳು ಪೂರ್ಣಗೊಂಡ ಬಳಿಕ ಹೊಸ ಬುಕಿಂಗ್ ಆರಂಭಿಸಲಾಗುತ್ತದೆ. ಭಕ್ತರ ಹೆಸರುಗಳನ್ನು ಡಿಜಿಟಲೀಕರಣಗೊಳಿಸಿ, ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಮಂಡಳಿ ತಿಳಿಸಿದೆ.
ಪ್ರಸ್ತುತ 2040ರವರೆಗೆ 705 ಮಂದಿ ಪಡಿಪೂಜೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಒಂದು ಪಡಿಪೂಜೆಯ ಶುಲ್ಕ ₹ 1,37,900 ಇದ್ದು, ಮಂಡಲ-ಮಕರವಿಳಕ್ಕು ಋತುವಿನಲ್ಲಿ ಮಾತ್ರ ಈ ಪೂಜೆ ನಡೆಯುವುದಿಲ್ಲ. ಇದೇ ವೇಳೆ, ಕೊಪ್ರಕ್ಕಲಂ ಬಳಿಯ ಸಣ್ಣ ಅಂಗಡಿಯನ್ನು ತೆರವುಗೊಳಿಸುವಂತೆ ಹೈಕೋರ್ಟ್ ಸೂಚಿಸಿದೆ. ಚಲಕಾಯಂ-ಪಂಬಾ ರಸ್ತೆ ನವೀಕರಣಕ್ಕೆ ₹15 ಕೋಟಿ ಮೀಸಲಿಟ್ಟಿರುವುದಾಗಿ ಮಂಡಳಿ ತಿಳಿಸಿದೆ.
ಶಬರಿಮಲೆ ಸನ್ನಿಧಾನದ 18 ಪವಿತ್ರ ಮೆಟ್ಟಿಲುಗಳಿಗೆ ಸಲ್ಲಿಸುವ ವಿಶೇಷ ಪೂಜೆಯೇ ಪಡಿಪೂಜೆ. ‘ಪಡಿ’ ಎಂದರೆ ಮೆಟ್ಟಿಲು ಎಂಬ ಅರ್ಥವಿದ್ದು, ಪದಿನೆಟ್ಟಾಂ ಪಡಿಯೆಂದು ಕರೆಯಲಾಗುವ ಈ 18 ಮೆಟ್ಟಿಲುಗಳು ಶಬರಿಮಲೆಯ ಪ್ರಮುಖ ಧಾರ್ಮಿಕ ಸಂಕೇತಗಳಾಗಿವೆ.
ಭಕ್ತರ ಸಂಖ್ಯೆ ಹೆಚ್ಚಾದಾಗ ಅರಾವಣ ಪ್ರಸಾದದ ಕೊರತೆಯಾಗದಂತೆ ಉತ್ಪಾದನಾ ಸಾಮರ್ಥ್ಯವನ್ನು ದೇವಸ್ವಂ ಮಂಡಳಿ ಹೆಚ್ಚಿಸುತ್ತಿದೆ. ಪ್ರಸ್ತುತ ದಿನಕ್ಕೆ 2ರಿಂದ 2.25 ಲಕ್ಷ ಅರಾವಣ ಟಿನ್‌ಗಳನ್ನು ತಯಾರಿಸಲಾಗುತ್ತಿದ್ದು, ಹೆಚ್ಚುವರಿಯಾಗಿ 6 ಉತ್ಪಾದನಾ ಘಟಕಗಳು, 2 ಕೂಲಿಂಗ್ ಚೇಂಬರ್‌ಗಳು ಹಾಗೂ ಒಂದು ಬಾಯ್ಲರ್ ಸ್ಥಾಪಿಸಲಾಗುತ್ತಿದೆ.
ಅನ್ನದಾನ ಮಂಟಪದ ನಿರ್ಮಾಣ ಪೂರ್ಣಗೊಂಡಿದ್ದರೂ ಸಾರ್ವಜನಿಕ ಸೇವೆಗೆ ಇನ್ನೂ ತೆರೆಯದಿರುವುದಕ್ಕೆ ಕಾರಣ ತಿಳಿಸುವಂತೆ ಹೈಕೋರ್ಟ್ ದೇವಸ್ವಂ ಮಂಡಳಿಗೆ ಸೂಚಿಸಿದೆ.




































