
ರಾಣೆಯಾರ್ ಸಮುದಾಯದ ಐತಿಹಾಸಿಕ ಸತ್ಯದರ್ಶನ ಮಹಾಸಭೆಯು ದಿನಾಂಕ 06-09 2026 ರಂದು ಕಾರ್ಕಳದ ಹೋಟೆಲ್ ಸ್ವಾಗತ್ ನಲ್ಲಿ ನಡೆಯಿತು.
ಶ್ರೀಮತಿ ಪ್ರತಿಮಾ ರಾಣೆ, ಮಾಜಿ ಪುರಸಭಾಧ್ಯಕ್ಷರು, ಕಾರ್ಕಳ, ಇವರು ಮತ್ತು ಸಮುದಾಯದ ಮಾರಿಗುಡಿಗಳ ಮುಖ್ಯಸ್ಥರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನನ್ನ ಸಮುದಾಯದ ರಣವೀರ ಬಂಧುಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಶ್ರೀಮತಿ ಪ್ರತಿಮಾ ರಾಣೆ ಈ ಸಂದರ್ಭದಲ್ಲಿ ಶುಭ ಹಾರೈಸುತ್ತಾ ನುಡಿದರು. ಅಭಿಲಾಷ್ ಪ್ರಾರ್ಥನೆ, ಅಕ್ಷಯ್ ಕಾಂತಾವರ ಸರ್ವರನ್ನು ಸ್ವಾಗತಿಸಿದರು. ವಕೀಲ ನಾಗಾರ್ಜುನ ಕಾಪು ಇವರು ಪ್ರಾಸ್ತಾವಿಕ ನಡೆಸಿಕೊಟ್ಟರು. ಪ್ರಕಾಶ್ ಎಂ ಡಿ ರಾಣೆಯಾರ್ ಇತಿಹಾಸದ ಸಿಂಹಾವಲೋಕನ ಕಾರ್ಯಕ್ರಮವನ್ನು ನಡೆಸಿ ಸಮುದಾಯ ಎಲ್ಲಿಂದ ಬಂದವರು? ಅವರ ಆರಾಧನಾ ಪದ್ಧತಿಗಳು, ಸಂಪ್ರದಾಯಗಳು ಮುಂತಾದ ಮಹತ್ವದ ಅಂಶಗಳ ಬಗ್ಗೆ ಬೆಳಕು ಚೆಲ್ಲಿ, ರಾಣೆಯಾರ್ ಸಮುದಾಯ ಕೇವಲ ಒಂದು ಜನಜಾತಿಯಲ್ಲ, ಅಂದೊಂದು ಸಂಸ್ಕೃತಿ. ಎಂಟು ಶತಮಾನಗಳಿಗೂ ಅಧಿಕ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಂಸ್ಕೃತಿ ಎಂಬುದನ್ನು ಸಮುದಾಯಕ್ಕೆ ವಿವರಿಸಿದರು.
ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಬಂಧುಗಳು ಸಭೆಯನ್ನು ವೈಭವಿಕರಿಸಿದರು. ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಸತೀಶ್ ಸುರತ್ಕಲ್ ರವರು ಸಮುದಾಯದ ಪೂರ್ಣ ಇತಿಹಾಸ, ಹಿನ್ನೆಲೆ ತಿಳಿದುಕೊಳ್ಳಲು, ಮುಂದೆ ನಡೆಯುವ ಪ್ರಶ್ನಾ ಚಿಂತನೆಯಲ್ಲಿ ಸ್ವಜಾತಿ ಬಾಂಧವರು ಸಹಕರಿಸಬೇಕಾಗಿ ವಿನಂತಿಸಿದರು. ಕುಮಾರಿ ಸುಮ ಕಾಪು ಅವರು ಭಾಗವಹಿಸಿದ ಸರ್ವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದರು. ಐದು ಜಿಲ್ಲೆಗಳ ಮಾರಿಗುಡಿಗಳ ಮುಖ್ಯಸ್ಥರು ಮತ್ತು ಪ್ರಮುಖರು ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.
ಅವಿನಾಶ್ ಬೆಂಗಳೂರು, ಸೂರಜ್ ಸೋಮನಾಥ್, ಶ್ರೀಧರ ಪಾತ್ರಿ, ಚರಣ್ ಸುರತ್ಕಲ್, ಶ್ರೀಮತಿ ಯೋಗಿನಿ, ಶ್ರೀನಿವಾಸ್, ಸುರೇಶ್ ಮತ್ತು ಶಂಕರ್ ಕಾಂತವಾರ, ಪುನೀತ್, ನಿತಿನ್ ಮುಂತಾದವರು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದರು. ಚಂದ್ರಶೇಖರ್ ಬೈಲಂಗಡಿ ಅವರು ಕಾರ್ಯಕ್ರಮ ನಿರೂಪಿಸಿದರು.




































