
ಲಖನೌ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ನೇಮಕಕ್ಕೆ ಅರ್ಜಿ ಆಹ್ವಾನಿಸಿತ್ತು.
ಈ ಹುದ್ದೆಗೆ ಬರೋಬ್ಬರಿ 5,200 ಅರ್ಜಿಗಳು ಬಂದಿದ್ದು, ಅಂತಿಮವಾಗಿ 20 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು. ಸಂದರ್ಶನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ರಾಮ ಮಂದಿರ ಟ್ರಸ್ಟ್‌ನ ಮೊದಲ CEO ಆಗಿ ನೇಮಕ ಮಾಡಲಾಗಿದೆ.
ಭಾರತೀಯ ವಾಯುಪಡೆಯಲ್ಲಿ ಹಲವು ಪ್ರಮುಖ ಕಮಾಂಡ್ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಜಿತೇಂದ್ರ ಮಿಶ್ರಾ ಅವರು, ಆಪರೇಷನ್ ಸಿಂಧೂರ್ ವೇಳೆ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಸುಮಾರು 38 ವರ್ಷಗಳ ವೃತ್ತಿಜೀವನದಲ್ಲಿ ಫೈಟರ್ ಸ್ಕ್ವಾಡ್ರನ್ ಕಮಾಂಡಿಂಗ್ ಆಫೀಸರ್, ಮುಖ್ಯ ಪರೀಕ್ಷಾ ಪೈಲಟ್ ಸೇರಿದಂತೆ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.
ಮಿಶ್ರಾ ಅವರು ‘ಅತಿ ವಿಶಿಷ್ಟ ಸೇವಾ ಪದಕ’ ಹಾಗೂ ‘ವಿಶಿಷ್ಟ ಸೇವಾ ಪದಕ’ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
ಇದೇ ವೇಳೆ ಟ್ರಸ್ಟ್ ಮೂವರು ಹೊಸ ಟ್ರಸ್ಟಿಗಳನ್ನು ಘೋಷಿಸಿದ್ದು, ಅವರಲ್ಲಿ ಮೊದಲ ಬಾರಿಗೆ ಒಬ್ಬ ಮಹಿಳೆಯೂ ಸೇರಿದ್ದಾರೆ. ದೆಹಲಿ ಮೂಲದ ಮಹೇಶ್ ಭಾಗಚಂದ್ಕ, ಅಯೋಧ್ಯೆಯ ವಕೀಲ ಮದನ್ ಮೋಹನ್ ಪಾಂಡೆ ಹಾಗೂ ಶಿಕೋಹಾಬಾದ್‌ನ ನಿರ್ಮಲಾ ಯಾದವ್ ನೂತನ ಟ್ರಸ್ಟಿಗಳಾಗಿ ನೇಮಕಗೊಂಡಿದ್ದಾರೆ.






















































































