19 ವರ್ಷದ ಗಣೇಶೋತ್ಸವ…. ಸಾಮಾಜಿಕ ಕಳಕಳಿಯ ಕಾರ್ಯ

ಗುಡಿಯಲ್ಲಿದ್ದ ಗಣಪನನ್ನು ಸಾರ್ವಜನಿಕವಾಗಿ ಪೂಜಿಸುವ ಕಲ್ಪನೆ ಹುಟ್ಟಿಕೊಂಡಿದ್ದರ ಹಿಂದೆ ಮಹಾನ್ ಕ್ರಾಂತಿಯ ಚಿಂತನೆಯಿದೆ. ಬ್ರಿಟಿಷ್ ಭಾರತದಲ್ಲಿ ಭಾರತೀಯರನ್ನು ಜಾತಿ, ಮತ, ಧರ್ಮಗಳ ಭೇದಭಾವವಿಲ್ಲದೆ ಒಗ್ಗೂಡಿಸುವ ಚಿಂತನೆಯಿಂದ ಬಾಲಗಂಗಾಧರ ತಿಲಕರು ಆಚರಣೆಗೆ ತಂದ ಸಾರ್ವಜನಿಕ ಗಣೇಶೋತ್ಸವ ಇಂದು ಸರ್ವವ್ಯಾಪಿಯಾಗಿದೆ.
ಯಾವ ಆಶಯದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಕಲ್ಪನೆಯನ್ನು ನೀಡಿದರೋ, ಆ ಆಶಯಕ್ಕೆ ಎಳ್ಳಷ್ಟೂ ಚ್ಯುತಿ ಬರದಂತೆ ಸರ್ವ ಜನಾಂಗವನ್ನು ಒಳಗೊಂಡು ನಡೆಯುವ ಸಾರ್ವಜನಿಕ ಗಣೇಶೋತ್ಸವಕ್ಕೆ ಸಾಕ್ಷಿಯೇ ನಮ್ಮ ಕಾರ್ಕಳದ “ಬಸ್‌ಸ್ಟ್ಯಾಂಡ್ ಗಣೇಶೋತ್ಸವ”.
ಕಾರ್ಕಳ ತಾಲೂಕಿನ ಕೇಂದ್ರ ಬಿಂದುವಾಗಿರುವ, ಜಿಲ್ಲೆಯ ನಾನಾ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಬಂದು ಹೋಗುವ ಕಾರ್ಕಳ ಬಸ್‌ಸ್ಟ್ಯಾಂಡ್‌ನಲ್ಲಿ, ಪ್ರತಿವರ್ಷದಂತೆ ಈ ಬಾರಿಯೂ ಎಲ್ಲರನ್ನೂ ಎದುರುಗೊಳ್ಳಲಿದ್ದಾನೆ ನಮ್ಮ ಪ್ರೀತಿಯ “ಬಸ್‌ಸ್ಟ್ಯಾಂಡ್ ಗಣಪ”.
ಕಳೆದ 19 ವರ್ಷಗಳಿಂದ ಎಲ್ಲಾ ಧರ್ಮ, ಜಾತಿ ಹಾಗೂ ವರ್ಗದ ಜನರಿಂದ ಶ್ರದ್ಧೆ ಮತ್ತು ಭಕ್ತಿಯಿಂದ ಪೂಜಿಸಲ್ಪಟ್ಟು, ತನ್ನ ಮೇಲೆ ನಂಬಿಕೆ ಇಟ್ಟು ಹರಕೆ ಹೊತ್ತ ಭಕ್ತರನ್ನು ಹರಸುತ್ತಾ ಬಂದಿರುವ ಬಸ್‌ಸ್ಟ್ಯಾಂಡ್ ಗಣಪ, ಭಕ್ತರು ಸಮರ್ಪಿಸುವ ಕಾಣಿಕೆಯನ್ನು ತನ್ನೊಳಗೆ ಇರಿಸಿಕೊಳ್ಳದೆ, ಸಂಕಷ್ಟದಲ್ಲಿರುವವರಿಗೆ ಧನಸಹಾಯದ ರೂಪದಲ್ಲಿ ನೀಡಿ ಅವರ ಕಷ್ಟಕ್ಕೆ ನೆರವಾಗುತ್ತಿದ್ದಾನೆ.
ಆ ಮೂಲಕ “ಸಂಕಷ್ಟಹರ ಗಣಪ” ಎಂಬ ತನ್ನ ಬಿರುದಿಗೆ ತಕ್ಕಂತೆ, ಸಂಕಷ್ಟದಲ್ಲಿರುವವರ ಪಾಲಿಗೆ ನೆರವಿನ ಹಸ್ತವಾಗಿದ್ದಾನೆ ನಮ್ಮ ಬಸ್‌ಸ್ಟ್ಯಾಂಡ್ ಗಣಪ.
ತನ್ನನ್ನು ನಂಬಿದ ಭಕ್ತರು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದಿಂದ ಬಾಳಿ ಬದುಕುವಂತೆ ಹರಸುವ ಬಸ್‌ಸ್ಟ್ಯಾಂಡ್ ಗಣೇಶ, ಮತ್ತೊಮ್ಮೆ ನಮಗೆ ದರ್ಶನ ನೀಡಲು ಇದೇ ಸೆಪ್ಟೆಂಬರ್ 14ರಂದು, ಕಾರ್ಕಳ ಬಸ್‌ಸ್ಟ್ಯಾಂಡ್‌ನಲ್ಲಿ 19ನೇ ಬಾರಿಗೆ ನಮ್ಮೆಲ್ಲರನ್ನು ಹರಸಲು ಬರುತ್ತಿದ್ದಾನೆ ಎಂದು ಕಾರ್ಕಳ ಬಸ್ ಸ್ಟ್ಯಾಂಡ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಶುಭದ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





































