
ಪಣಜಿ: ಮುಂಬೈ-ಗೋವಾ ಹೆದ್ದಾರಿ ವಿಸ್ತರಣೆ ಕಾಮಗಾರಿ 15 ವರ್ಷಗಳಿಂದ ವಿಳಂಬವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬುಧವಾರ ಪಣಜಿಯ ಪೋರ್ವೋರಿಮ್‌ನಲ್ಲಿ ಮೇಲ್ಸೇತುವೆ ರಸ್ತೆ ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ಹೆದ್ದಾರಿ ಯೋಜನೆ ವಿಳಂಬವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಕಾಮಗಾರಿ ಪೂರ್ಣಗೊಂಡ ಬಳಿಕ ಅದರ ಉದ್ಘಾಟನೆಗೆ ತಾವು ಬರುವುದಿಲ್ಲ ಎಂದರು.
ಆದರೆ ರಸ್ತೆ ಮಾರ್ಗವಾಗಿ ಸಂಚರಿಸಿ ಕಾಮಗಾರಿಯನ್ನು ಪರಿಶೀಲಿಸುವುದಾಗಿ ತಿಳಿಸಿದ ಗಡ್ಕರಿ, ಪ್ರಯಾಣಿಕರಿಗೆ ರಸ್ತೆ ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ಖುದ್ದಾಗಿ ತಿಳಿದುಕೊಳ್ಳಬೇಕಿದೆ ಎಂದರು.
ಇನ್ನು ಯೋಜನೆಗಳ ವಿಳಂಬ ಹಾಗೂ ಕಳಪೆ ಕಾಮಗಾರಿಗೆ ಕಾರಣವಾಗುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದರ ಜತೆಗೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.




































